ಕಾರವಾರ: ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷ ವಿವಿಧ ಹುದ್ದೆ, ಅಧಿಕಾರ ಅನುಭವಿಸಿರುವ ಸಂಸದ ವಿಶ್ವೇಶ್ವರ ಹೆಗಡೆಯವರು ಕ್ಷೇತ್ರಕ್ಕೆ, ಜಿಲ್ಲೆಗೆ ತಮ್ಮ ಸಾಧನೆ ಏನೆಂದು ಮೊದಲು ತಿಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸವಾಲು ಹಾಕಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವೈದ್ಯ, ಕಾರವಾರದಲ್ಲಿನ ಆಸ್ಪತ್ರೆಯನ್ನು ಮಲ್ಟಿ ಸ್ಪೇಷಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸಲಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯನವರು ಜಿಲ್ಲೆಗೆ ಸೂಪರ ಸ್ಪೇಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನು ಈ ಬಾರಿಯ ಅಯವ್ಯಯದಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ. ಆದರೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತ್ರ ಸರ್ಕಾರದ ಮೇಲೆ ಇಲ್ಲ ಸಲ್ಲದ ಟೀಕೆ ಟಿಪ್ಪಣೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರವಾರದಲ್ಲಿ ನಮ್ಮ ಕಾಂಗ್ರೇಸ್‌ ಸರ್ಕಾರವೇ ವೈದ್ಯಕೀಯ ಕಾಲೇಜಿಗೆ ಶಂಕು ಸ್ಥಾಪನೆ ಮಾಡಿದ್ದು, ಅದನ್ನು ಮೇಲ್ದರ್ಜೆಗೆರಿಸಿ ಮಲ್ಟಿ ಸ್ಪೇಷಾಲಿಟಿ ಮಾಡಿದ್ದು ತಮ್ಮದೇ ಸರ್ಕಾರ. ಇಂಥದ್ದರಲ್ಲಿ ಬಿಜೆಪಿಯ ಸಾಧನೆ ಏನು ಎಂದು ಪ್ರಶ್ನಿಸಿದರು.

ಸುಮಾರು ಮೂವತ್ತು ವರ್ಷಗಳಿಗಿಂತ ಹೆಚ್ಚು ಅವಧಿ ಅಧಿಕಾರದಲ್ಲಿದ್ದು, ಶಾಸಕ, ಸಚಿವ, ಸ್ಪೀಕರ್‌ ಹಾಗೂ ಹಾಲಿ ಸಂಸದರಾಗಿ ಕಾಗೇರಿ ತಮ್ಮ ಕ್ಷೇತ್ರಕ್ಕೆ, ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಇವರ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರವಿತ್ತು. ಕನಿಷ್ಠ ಶಿರಸಿಗಾದರೂ ಸೂಪರ್‍ ಸ್ಪೇಷಾಲಿಟಿ ಆಸ್ಪತ್ರೆ ತರಬಹುದಾಗಿತ್ತು. ಆದರೆ ಅದು ಅವರಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಶಾಸಕ ಭಿಮಣ್ಣ ನಾಯ್ಕ ಇದ್ದರು.