Karwar| ನೌಕಾನೆಲೆಯಲ್ಲಿ ಹಿರಿಯ ನಾವಿಕರು ಹಾಗೂ ರಕ್ಷಣಾ ನಾಗರಿಕ ಸಿಬ್ಬಂದಿಗಳಿಗಾಗಿ ನಿರ್ಮಿಸಲಾದ 300 ವಸತಿ ಘಟಕಗಳನ್ನು ಪಶ್ಚಿಮ ನೌಕಾಪಡೆ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (FOCINC) ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಉದ್ಘಾಟಿಸಿದರು.

ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಈ ವಸತಿ ಸಮುಚ್ಚಯವನ್ನು Project Seabird ಯೋಜನೆಯಡಿ ನಿರ್ಮಿಸಲಾಗಿದೆ. ವಿಶ್ವಮಟ್ಟದ ಸೌಕರ್ಯಗಳನ್ನು ಹೊಂದಿರುವ ಈ ಗೃಹ ನಿರ್ಮಾಣ ಯೋಜನೆಯು, ನೌಕಾಪಡೆಯ ಮೂಲಸೌಕರ್ಯ ವೃದ್ಧಿ ಹಾಗೂ ನೌಕಾಪಡೆಯ ಕುಟುಂಬಗಳ ಆರೋಗ್ಯ ಮತ್ತು ಸಮಗ್ರ ಕಲ್ಯಾಣಕ್ಕೆ ನೀಡುತ್ತಿರುವ ಬದ್ಧತೆ ಮತ್ತು ಕಾಳಜಿಯ ಪ್ರತೀಕವಾಗಿದೆ.
ಕಾರ್ಯಕ್ರಮದಲ್ಲಿ ಪ್ರಾಜೆಕ್ಟ್ ಸೀಬರ್ಡ್ ಮಹಾನಿರ್ದೇಶಕ ರಾಜೇಶ ಧನಕರ್ ಹಾಗೂ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಕರ್ನಾಟಕ (FOK) ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಸೇರಿದಂತೆ ನೌಕಾಪಡೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವಸತಿ ಯೋಜನೆ ಮೂಲಕ ಕಾರವಾರ ನೌಕಾ ತಾಣದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ಬಲ ದೊರೆತಿದ್ದು, ನೌಕಾಪಡೆ ಸಿಬ್ಬಂದಿಗೆ ಉತ್ತಮ ಜೀವನಮಟ್ಟ ಒದಗಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
