ಶಿರಸಿ ತಾಲೂಕಿನ ಕಸ್ತೂರಬಾ ನಗರದಲ್ಲಿ ಎರಡು ವರ್ಷದ ಬಾಲೆ ಬಾವಿಗೆ ಬಿದ್ದ ಘಟನೆ ನಡೆದಿದ್ದು, ಸ್ಥಳೀಯ ವ್ಯಕ್ತಿಯ ಧೈರ್ಯದಿಂದ ಮಗು ಜೀವಂತವಾಗಿ ರಕ್ಷಿಸಲ್ಪಟ್ಟ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ.

ಮನೆಯಲ್ಲಿದ್ದ ಭುವಿ (2) ಎಂಬ ಬಾಲೆಯನ್ನು ಊಟಕ್ಕೆ ಹುಡುಕುತ್ತಿದ್ದ ಕುಟುಂಬದವರು ಎಷ್ಟು ಹುಡುಕಿದರೂ ಮಗು ಸಿಗಲಿಲ್ಲ. ಇದರಿಂದ ಆತಂಕಗೊಂಡ ಅಜ್ಜಿ ಮನೆಯ ಹಿಂದಿನ ಬಾವಿಯ ಕಡೆಗೆ ತೆರಳಿ ನೋಡಿದಾಗ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಬಾವಿಯೊಳಗೆ ನೋಡಿದಾಗ ಮಗು ಬಾವಿಗೆ ಬಿದ್ದು ಪಂಪ್‌ಗೆ ಅಳವಡಿಸಿದ್ದ ಪೈಪ್ ಹಿಡಿದುಕೊಂಡೇ ಅಳುತ್ತಿತ್ತು.

ಈ ವಿಷಯ ತಕ್ಷಣ ಅಕ್ಕಪಕ್ಕದವರಿಗೆ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಸೇರಿದರು. ಇದೇ ವೇಳೆ ಸಮೀಪದಲ್ಲಿದ್ದ ಸಾರೀಕಾ ಸೇವಾ ಸಂಸ್ಥೆಯ ಸಂಸ್ಥಾಪಕ ಪಯ್ಯು ಚವಟಿ ಅವರಿಗೆ ವಿಷಯ ತಲುಪಿತು. ಆಗ ಅವರು ಬೆಂಗಳೂರಿಗೆ ತೆರಳಲು ಸಿದ್ಧವಾಗಿದ್ದರೂ ಒಂದು ಕ್ಷಣವೂ ವಿಳಂಬ ಮಾಡದೇ ಬಾವಿಯ ಕಡೆಗೆ ಧಾವಿಸಿದರು.

ಸ್ಥಳೀಯರ ಸಹಾಯದಿಂದ ಬಾವಿಗೆ ಇಳಿದ ಪಯ್ಯು ಚವಟಿ, ಭಯದಿಂದ ಅಳುತ್ತಿದ್ದ ಬಾಲೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಜೀವಂತವಾಗಿ ರಕ್ಷಿಸಿದರು. ಮಗುವಿನ ಜೀವ ಉಳಿಸಿದ ಪಯ್ಯು ಚವಟಿಯನ್ನು ಬಾಲೆಯ ಅಜ್ಜಿ ‘ನಮ್ಮ ಪಾಲಿನ ದೇವರು’ ಎಂದು ಕಣ್ಣೀರಿನಿಂದ ಕೊಂಡಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಯ್ಯು ಚವಟಿ, “ಆ ಸಮಯದಲ್ಲಿ ಯಾರೇ ಇದ್ದರೂ ಇದೇ ಮಾಡುತ್ತಿದ್ದರು” ಎಂದು ವಿನಮ್ರವಾಗಿ ಹೇಳಿದ್ದಾರೆ. ಈ ಧೈರ್ಯಮಯ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.