ಕಾರವಾರ: ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 50 ಸಾವಿರ ಲೀಟರ್ ಮದ್ಯಸಾರ (Extra Neutral Alcohol) ವನ್ನು ಟ್ಯಾಂಕರ್ ಸಮೇತ ಜಪ್ತು ಮಾಡಿ, ಇಬ್ಬರನ್ನು ಬಂಧಿಸಿದ ಘಟನೆ ಜೋಯಿಡಾ ತಾಲೂಕಿನ ರಾಮನಗರದ ಧಾರವಾಡ–ಗೋವಾ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಬಳಿ ನಡೆದಿದೆ.
ಟ್ಯಾಂಕರ್ ಚಾಲಕರಾದ ಮಧ್ಯಪ್ರದೇಶ ರಾಜ್ಯದ ಇಂದೋರ್ ನ ಮಗ್ಗರ್ ಸಿಂಗ್ಹಾ ಹಾಗೂ ಗದಗ ಜಿಲ್ಲೆಯ ರೋಣದ ಧರ್ಮಪ್ಪ ಕಳಕಪ್ಪ ಕಟ್ಟಿಮನಿ ಬಂಧಿತರು.
ರಾಮನಗರದ ಧಾರವಾಡ–ಗೋವಾ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಬಳಿ ಟಾಟಾ ಕಂಪನಿಯ ಟ್ಯಾಂಕರ್ (ನೋಂದಣಿ ಸಂಖ್ಯೆ MP/09/HH/1908)ನ್ನು ಅಬಕಾರಿ ಅಧಿಕಾರಿಗಳು ತಡೆದು ಪರಿಶೀಲಿಸಿದಾಗ 30 ಸಾವಿರ ಲೀಟರ್ Denatured Rectified Spirit (Non-potable) ಎಂದು ನಕಲಿ ದಾಖಲೆ ಸೃಷ್ಟಿಸಿ ದಾವಣಗೆರೆ ಶುಗರ್ ಕಂಪನಿ ಲಿಮಿಟೆಡ್‌ನಿಂದ ಗೋವಾ ರಾಜ್ಯದ ಗ್ಲೋಬಲ್ ಕೆಮ್ ಕಾರ್ಪ್, ಕುಂಡೆಮ್‌ಗೆ ಸಾಗಿಸಲಾಗುತ್ತಿತ್ತು.
ಅದೇ ರೀತಿ ಮತ್ತೊಂದು ಟ್ಯಾಂಕರ್ (ನೋಂದಣಿ ಸಂಖ್ಯೆ KA/48/8218) ನಲ್ಲಿ 20ಸಾವಿರ ಲೀಟರ್ Ethanol (Non-potable purpose) ಎಂದು ನಕಲಿ ದಾಖಲೆ ಸೃಷ್ಟಿಸಿ ದಾವಣಗೆರೆಯ ಶ್ರೀ ಸಾಯಿ ಟ್ರೇಡರ್ಸ್ ಅಂಡ್ ಕಂಪನಿಯಿಂದ ಗೋವಾ ರಾಜ್ಯದ ವರ್ಧನ್ ಸಪ್ಲಿಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಪಿಲರ್ನೆ ಇಂಡಸ್ಟ್ರಿಯಲ್ ಎಸ್ಟೇಟ್‌ಗೆ ಸಾಗಿಸಲಾಗುತ್ತಿತ್ತು.
ಸಂದೇಹಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪ್ರೈಮರಿ ಡಿಸ್ಟಿಲರಿಯ ರಸಾಯನಶಾಸ್ತ್ರಜ್ಞರನ್ನು ಸ್ಥಳಕ್ಕೆ ಕರೆಸಿ ಆಲ್ಕೋ ಮೀಟರ್ ಉಪಕರಣದ ಮೂಲಕ ಪರೀಕ್ಷೆ ನಡೆಸಿದ ಅಬಕಾರಿ ಅಧಿಕಾರಿಗಳು ಎರಡೂ ಟ್ಯಾಂಕರ್‌ಗಳಲ್ಲಿ ಸಾಗಿಸಲಾಗುತ್ತಿದ್ದ ದ್ರವವು ಮದ್ಯಸಾರ ಆಗಿರುವುದು ದೃಢಪಟ್ಟಿದೆ.
ತಕ್ಷಣವೇ ಎರಡೂ ಟ್ಯಾಂಕರ್‌ಗಳನ್ನು ಹಾಗೂ ಅವುಗಳಲ್ಲಿ ಇದ್ದ 50 ಸಾವಿರ ಲೀಟರ್ ಮದ್ಯಸಾರವನ್ನು ಅಬಕಾರಿ ಅಧಿಕಾರಿಗಳು ಜಪ್ತು ಮಾಡಿದ್ದಾರೆ. ಜಪ್ತಿಯಾದ ಮದ್ಯಸಾರದ ಅಂದಾಜು ಮೌಲ್ಯ ₹40 ಲಕ್ಷವಾಗಿದ್ದು, ಟ್ಯಾಂಕರ್‌ಗಳ ಮೌಲ್ಯ ₹50 ಲಕ್ಷ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಜಪ್ತಿ ಮೌಲ್ಯ ₹90 ಲಕ್ಷವಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯಲ್ಲಾಪುರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಹಾಗೂ ದಾಂಡೇಲಿ ವಲಯದ ಅಬಕಾರಿ ನಿರೀಕ್ಷಕರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
