Karwar| ಅಬಕಾರಿ ಇಲಾಖೆಯ ಸಿಬ್ಬಂದಿಗಳು ಭರ್ಜರಿ ದಾಳಿ ನಡೆಸಿ ಮೀನು ಸಾಗಾಟ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ಸಮೇತ 18 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡು ಓರ್ವನ ಬಂಧಿಸಿದ ಘಟನೆ ಇಲ್ಲಿನ ಮಾಜಾಳಿ ತನಿಖಾ ಠಾಣೆಯಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಮಾಜಾಳಿ ತನಿಖಾ ಠಾಣೆ ಬಳಿ ಗೋವಾದಿಂದ ಕಾರವಾರದ ಕಡೆಗೆ ಬರುತ್ತಿದ್ದ ಮಹೇಂದ್ರ ಬೊಲೆರೋ ಮ್ಯಾಕ್ಸ್ ಪಿಕಪ್ ವಾಹನವನ್ನು ಅಬಕಾರಿ ಸಿಬ್ಬಂದಿಗಳು ತಡೆದು ಪರಿಶೀಲನೆ ನಡೆಸಿದಾಗ, ಮೀನಿನ ಪ್ಲಾಸ್ಟಿಕ್ ಟ್ರೇಗಳಲ್ಲಿ ಅಡಗಿಸಿಟ್ಟಿದ್ದ 13 ಪೆಟ್ಟಿಗೆಗಳಲ್ಲಿ ಒಟ್ಟು 156 ಮದ್ಯದ ಬಾಟಲಿಗಳು ಪತ್ತೆಯಾಗಿದೆ. ಪ್ರತಿ ಪೆಟ್ಟಿಗೆಯಲ್ಲಿ 12 ಬಾಟಲಿಗಳಿದ್ದು, ಒಟ್ಟು 117 ಲೀಟರ್ ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.
ಜಪ್ತಿಗೊಂಡ ಮದ್ಯದ ಅಂದಾಜು ಮೌಲ್ಯ ₹1,84,800 ಆಗಿದ್ದು, ವಾಹನದ ಮೌಲ್ಯ ₹16 ಲಕ್ಷ ಹಾಗೂ 46 ಮೀನಿನ ಪ್ಲಾಸ್ಟಿಕ್ ಟ್ರೇಗಳ ಮೌಲ್ಯ ₹23 ಸಾವಿರ ಸೇರಿ ಒಟ್ಟು ₹18,07,800 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದೆ.