ರಾಜ್ಯದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ನೈಜತೆ ಪರಿಶೀಲನೆಗೆ ಸರ್ಕಾರ ಆದೇಶ ನೀಡುವ ಮೂಲಕ ಪಿಂಚಣಿ (pension) ಪಡೆಯುವವರ ಮೇಲೆ ಇದೀಗ ಸರಕಾರ (Government)ಕಣ್ಣು ಹಾಕಿದೆ.
ನಿಗದಿಯ ವಯೋಮಾನ ಇಲ್ಲದವರು (age limit), ನಿಗದಿತ ಆದಾಯಕ್ಕಿಂತ ಹೆಚ್ಚಿರುವವರು (income limit), ತೆರಿಗೆ ಪಾವತಿದಾರರು (tax payers), ಎಪಿಎಲ್ ಕಾರ್ಡ್ (APL Card) ಬಳಕೆದಾರರ ಫಲಾನುಭವಿಗಳ ಮಾಹಿತಿ ಪಡೆಯಲಾಗಿದ್ದು, ಇವರೆಲ್ಲರೂ ಸಾಮಾಜಿಕ ಭದ್ರತೆಯ ಪಿಂಚಣಿ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ, ಅಂಗವಿಕಲ ವೇತನ, ಮೈತ್ರಿ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಪತ್ನಿಗೆ ವಿಧವಾ ವೇತನ, ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ ಯೋಜನೆ, ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಮಿತ ವೇತನ, ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಮತ್ತು ಕುಟುಂಬ ಪಿಂಚಣಿ, ಗೋವಾ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಮತ್ತು ಕುಟುಂಬ ಪಿಂಚಣಿ, ಮಾಜಿ ದೇವದಾಸಿ ಮಾಸಾಶನಗಳು ಪ್ರಸ್ತುತ ರಾಜ್ಯ ಸರಕಾರದಿಂದ ದೊರೆಯುತ್ತಿದೆ.
ರಾಜ್ಯದಲ್ಲಿ 82 ಲಕ್ಷಕ್ಕೂ ಮಿಕ್ಕಿ ಫಲಾನುಭವಿಗಳು
ರಾಜ್ಯದಲ್ಲಿ ಒಟ್ಟು 82,47, 431 ಫಲಾನುಭವಿಗಳು ಈ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳನ್ನು (pension)ಪಡೆಯುತ್ತಿದ್ದು, ಈ ಫಲಾನುಭವಿಗಳ ಪೈಕಿ ಸಂದೇಹಾಸ್ಪದ ಗ್ರಾಮವಾರು, ವಾರ್ಡ್‌ವಾರು ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದೆ. ಈ ಪಟ್ಟಿಯ ಆಧಾರದ ಮೇಲೆ ಫಲಾನುಭವಿಗಳ ನೈಜತೆ ಪರಿಶೀಲಿಸಿ ಅಪ್‌ಲೋಡ್ ಮಾಡಲು “ಸಂಯೋಜನೆ” ಹೆಸರಿನ ವಿಶೇಷ ಮೊಬೈಲ್ ಆ್ಯಪ್ (mobile app) ಕೂಡಾ ಅಭಿವೃದ್ಧಿಪಡಿಸಲಾಗಿದೆ.
*ಅರ್ಹರು ಹೊರಗುಳಿಯುವ ಭೀತಿ*
ಸಂದೇಹಾಸ್ಪದ ಪಟ್ಟಿಯಲ್ಲಿ ಕಡಿಮೆ ವಯಸ್ಸಿನವರು, ಆದಾಯ ಮಿತಿಯನ್ನು ಮೀರಿದವರು, ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರನ್ನು ಗುರುತಿಸಲಾಗಿದೆ. ಆದರೆ, ವಾಸ್ತವದಲ್ಲಿ ಅರ್ಹರಾಗಿರುವ ಹಲವರು ಈ ಪಟ್ಟಿಗೆ ಸೇರ್ಪಡೆಯಾಗಿರುವುದು ಗೊಂದಲಕ್ಕೆ ಕಾರಣವಾಗಿದೆ.
ಹಲವಾರು ಪಿಂಚಣಿದಾರರು ಹಿಂದೆ ವಯಸ್ಸು ದೃಢೀಕರಣಕ್ಕಾಗಿ ವೈದ್ಯಕೀಯ ಪ್ರಮಾಣಪತ್ರ, ಶಾಲಾ ದಾಖಲೆ (school document), ಜನ್ಮ ಪ್ರಮಾಣಪತ್ರ (birth certificate) ಹಾಗೂ ಮತದಾರರ ಗುರುತಿನ ಚೀಟಿ (Voter ID) ಸಲ್ಲಿಸಿ ಸೌಲಭ್ಯ ಪಡೆದಿದ್ದಾರೆ. ಆದರೆ, ಈಗ ಆಧಾರ್ ಕಾರ್ಡ್‌ನ ಜನ್ಮ ದಿನಾಂಕವನ್ನು ಆಧಾರವಾಗಿಟ್ಟುಕೊಂಡು ಸಂದೇಹಾಸ್ಪದ ಪಟ್ಟಿಯನ್ನು ಸಿದ್ಧಪಡಿಸಿರುವುದರಿಂದ ಅನೇಕ ಅರ್ಹರು ಹೊರಗುಳಿಯುವ ಭೀತಿ ವ್ಯಕ್ತವಾಗಿದೆ.
*ಸಂದೇಹಾಸ್ಪದ ಪ್ರಕರಣಗಳು*
ರಾಜ್ಯದಲ್ಲಿ ಒಟ್ಟು 23,12,385 ಪಿಂಚಣಿದಾರರನ್ನು ಸಂದೇಹಾಸ್ಪದ ಪ್ರಕರಣಗಳೆಂದು ಗುರುತಿಸಲಾಗಿದೆ. ಜಿಲ್ಲಾವಾರು ನೋಡಿದರೆ ಬೆಳಗಾವಿಯಲ್ಲಿ ಅತಿ ಹೆಚ್ಚು 1,82,000 ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 64,893, ಉತ್ತರ ಕನ್ನಡದಲ್ಲಿ 37,417 ಹಾಗೂ ಉಡುಪಿಯಲ್ಲಿ 42,525 ಪ್ರಕರಣಗಳು ದಾಖಲಾಗಿವೆ.
ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಗಳಿಗೆ ವಾರ್ಷಿಕ 32,000ರೂ. ಆದಾಯ ಮಿತಿ ನಿಗದಿಪಡಿಸಿದೆ. ಆದರೆ, ಬಿಪಿಎಲ್ (BPL)ಕುಟುಂಬಗಳ ಆದಾಯ ಮಿತಿ 1.20 ಲಕ್ಷ ರೂ. ಆಗಿದ್ದು, ಈ ವ್ಯತ್ಯಾಸವೂ ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೂ ನಡೆದಿದೆ.
*3 ವಾರದಲ್ಲಿ ಪೂರ್ಣಗೊಳಿಸಲು ಗಡುವು*
ಇನ್ನೊಂದೆಡೆ, ಆದಾಯ ಪ್ರಮಾಣಪತ್ರ ಪಡೆಯುವ ವೇಳೆ ಕುಟುಂಬದ ಎಲ್ಲಾ ಸದಸ್ಯರನ್ನು ಒಟ್ಟಾಗಿ ತೋರಿಸುವುದರಿಂದ ಒಟ್ಟು ಆದಾಯ ಹೆಚ್ಚಾಗಿ ದಾಖಲಾಗುತ್ತಿದೆ. ಇದರಿಂದ ನಿಜವಾದ ಫಲಾನುಭವಿಗಳು ಅರ್ಹತೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪರಿಶೀಲನಾ ಪ್ರಕ್ರಿಯೆಯನ್ನು 3 ವಾರದಲ್ಲಿ ಪೂರ್ಣಗೊಳಿಸಲು ಸರ್ಕಾರ (Government) ಗಡುವು ನೀಡಿದ್ದು, ಗ್ರಾಮ ಲೆಕ್ಕಾಧಿಕಾರಿ ಅಥವಾ ಆಡಳಿತಾಧಿಕಾರಿ ಮನೆ ಮನೆಗೆ ತೆರಳಿ ಈ ಸೌಲಭ್ಯದ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ.
ಮೊದಲೇ ಕೆಲಸದ ಒತ್ತಡದಲ್ಲಿರುವ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಲು ಕಷ್ಟಪಡುತ್ತಿದ್ದಾರೆ. ಇದರಿಂದ ನಿಜವಾದ ಫಲಾನುಭವಿಗಳು ಪಿಂಚಣಿಯಿಂದ ವಂಚಿತರಾಗುವ ಆತಂಕ ವ್ಯಕ್ತವಾಗಿದೆ.
ಪಿಂಚಣಿಯ ಮೇಲೆ ಅವಲಂಬಿತವಾಗಿರುವ ಬಡವರು ದಿನನಿತ್ಯದ ಜೀವನ ಸಾಗಿಸಲು ಸಂಕಷ್ಟ ಅನುಭವಿಸುವ ಸಾಧ್ಯತೆ ಇರುವುದರಿಂದ ಸರ್ಕಾರ ಮಾನವೀಯ ದೃಷ್ಠಿಯೊಂದಿಗೆ ಈ ಪರಿಶೀಲನಾ ಪ್ರಕ್ರಿಯೆ ನಡೆಸಬೇಕೆಂದು ಜನರು ಆಗ್ರಹಿಸಿದ್ದಾರೆ.
