ಸಂಗೀತ ಕ್ಷೇತ್ರದ ದಿಗ್ಗಜೆ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ಗಾಯಕಿ ಆಶಾ ಭೋಸ್ಲೆ ಅವರು 92ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಹೃದಾಯಾಘಾತದಿಂದ ಮುಂಬೈನ  ಆಸ್ಪತ್ರೆಗೆ ದಾಖಲಾಗಿದ್ದ ಅವರು, ತನ್ನ ಅಂತಿಮ ಶ್ವಾಸದೊಂದಿಗೆ ಸಂಗೀತ ಜೀವನಕ್ಕೆ ಪೂರ್ಣವಿರಾಮ ಹಾಕಿದ್ದಾರೆ. ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಎಂಟು ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿದ ಅವರು, ಪದ್ಮ ವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿದ್ದರು. 

ಆಶಾ ಭೋಸ್ಲೆ ಅವರು ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿ ಹಾಗೂ ಖ್ಯಾತ ಮಂಗೇಶ್ಕರ್ ಕುಟುಂಬದ ಸದಸ್ಯೆ. ಅವರ ಬಹುಮುಖ ಪ್ರತಿಭೆ ಅವರನ್ನು ವಿಭಿನ್ನ ಗಾಯಕಿಯಾಗಿ ಗುರುತಿಸಿತ್ತು. ಚಲನಚಿತ್ರ ಸಂಗೀತ, ಪಾಪ್, ಗಜಲ್, ಭಜನೆ, ಶಾಸ್ತ್ರೀಯ ಸಂಗೀತ, ಜಾನಪದ ಗೀತೆಗಳು, ಕವ್ವಾಲಿ ಹಾಗೂ ರವೀಂದ್ರ ಸಂಗೀತ ಸೇರಿದಂತೆ ಅನೇಕ ಸಂಗೀತ ಶೈಲಿಗಳ ಮೂಲಕ ಗಂಧರ್ವ ಲೋಕವೇ ನಾಚುವಂತೆ ಹಾಡುತ್ತಿದ್ದರು. ಹಿಂದಿ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ ಅವರು, 2006ರ ವೇಳೆಗೆ 12,000ಕ್ಕೂ ಹೆಚ್ಚು ಹಾಡುಗಳ ಧ್ವನಿ ಮುದ್ರಿಸಿದ್ದರು.

2013ರಲ್ಲಿ ‘ಮಾಯ್’ ಚಿತ್ರದಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿ ಮೆಚ್ಚುಗೆಗೂ ಪಾತ್ರರಾಗಿದ್ದರು. 1943ರಲ್ಲಿ ‘ಮಝಾ ಬಾಲ್’ ಮರಾಠಿ ಚಿತ್ರದ ‘ಚಲಾ ಚಲಾ ನವ್ ಬಾಲಾ’ ಹಾಡಿನ ಮೂಲಕ ಗಾಯನ ಜೀವನ ಆರಂಭಿಸಿದ ಅವರು, 1948ರಲ್ಲಿ ‘ಚುನಾರಿಯಾ’ ಹಿಂದಿ ಚಿತ್ರದ ‘ಸಾವನ್ ಆಯಾ’ ಹಾಡಿನ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡಿದ್ದರು. 

ತನ್ನ ವೃತ್ತಿಜೀವನದಲ್ಲಿ ಅವರು ವಿವಿಧ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಅಜರಾಮರ ಸ್ಥಾನವನ್ನು ಪಡೆದಿದ್ದರು.ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು BFJA ಪ್ರಶಸ್ತಿಗಳು, ಹದಿನೆಂಟು ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಒಂಭತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದು, ಅದರಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಯಾಗಿ ದಾಖಲೆಯ ಏಳು ಬಾರಿ ಗೌರವಿಸಲ್ಪಟ್ಟಿದ್ದಾರೆ.

ಜೊತೆಗೆ ಅವರಿಗೆ ಎರಡು ಗ್ರ್ಯಾಮಿ ನಾಮನಿರ್ದೇಶನಗಳೂ ದೊರೆತಿವೆ. 2000ರಲ್ಲಿ ಭಾರತೀಯ ಸಿನೆಮಾದ ಅತ್ಯುನ್ನತ ಗೌರವವಾದ ದಾದ ಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 2008ರಲ್ಲಿ ಭಾರತ ಸರ್ಕಾರವು ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ ನೀಡಿ ಗೌರವಿಸಿತು. 2011ರಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅವರು ಸಂಗೀತ ಇತಿಹಾಸದಲ್ಲಿ ಅತೀ ಹೆಚ್ಚು ಹಾಡುಗಳನ್ನು ಧ್ವನಿ ಮುದ್ರಿಸಿದ ಕಲಾವಿದೆ ಎಂದು ಗುರುತಿಸಿತ್ತು. 

ಆಶಾ ಭೋಸ್ಲೆ 16ನೇ ವಯಸ್ಸಿನಲ್ಲಿ ಕುಟುಂಬದ ವಿರೋಧದ ನಡುವೆ ಗಣಪತ್ರಾವ್ ಭೋಸ್ಲೆ ಅವರನ್ನು ವಿವಾಹವಾಗಿದ್ದರು. ಆದರೆ, ಈ ಸಂಬಂಧ ಹೆಚ್ಚು ಕಾಲ ನಡೆದಿರಲಿಲ್ಲ. ಅವರು ಗರ್ಭಿಣಿಯಾಗಿದ್ದಾಗಲೇ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆಗೆ ಮರಳಿದರು ಮತ್ತು 1960ರಲ್ಲಿ ಬೇರ್ಪಟ್ಟರು. ಅವರ ಮೂವರು ಮಕ್ಕಳ ಪೈಕಿ ಹಿರಿಯ ಪುತ್ರ ಹೇಮಂತ್ ಭೋಸ್ಲೆ ಸಂಗೀತ ನಿರ್ದೇಶಕರಾಗಿದ್ದು, 2015ರಲ್ಲಿ ಕ್ಯಾನ್ಸರ್‌ನಿಂದ ನಿಧನರಾದರು. ಪುತ್ರಿ ವರ್ಷಾ ಭೋಸ್ಲೆ ಪತ್ರಕರ್ತೆಯಾಗಿದ್ದು, 2012ರಲ್ಲಿ ಆತ್ಮ***ಹತ್ಯೆ ಮಾಡಿಕೊಂಡಿದ್ದರು. ಕಿರಿಯ ಪುತ್ರ ಆನಂದ್ ಭೋಸ್ಲೆ ತಾಯಿಯ ವೃತ್ತಿಜೀವನವನ್ನು ಮುಂದುವರಿಸಿದ್ದರು. 

1980ರಲ್ಲಿ ಆಶಾ ಭೋಸ್ಲೆ ಪ್ರಸಿದ್ಧ ಸಂಗೀತ ನಿರ್ದೇಶಕ ರಾಹುಲ್ ದೇವ್ ಬರ್ಮನ್ ಅವರನ್ನು ವಿವಾಹವಾದರು. ಇವರಿಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು.  ಒಟ್ಟಿನಲ್ಲಿ, ಆಶಾ ಭೋಸ್ಲೆ ಅವರು ಸಂಗೀತ ಲೋಕಕ್ಕೆ ಭಾರೀ ದೊಡ್ಡ ಕೊಡುಗೆ ನೀಡಿದ್ದು, ಅವರ ಅಗಲಿಕೆಯು ಇಡೀ ವಿಶ್ವಕ್ಕೆ ತುಂಬಲಾರದ ನಷ್ಟವಾಗಿದೆ.