ಶಿರಸಿ : ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ಬಿ.ಜೆ.ಪಿ ಮುಖಂಡ ಅನೀಸ್ ತಶೀಲ್ದಾರ್ ಹತ್ಯೆಗೆ ಯತ್ನ ಪ್ರಕರಣ ಸಂಬಂಧಿಸಿ 6 ಮಂದಿ ಆಪರಾಧಿಗಳಿಗೆ ಶಿಕ್ಷೆ ವಿಧಿಸಿ ಶಿರಸಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಪ್ರಕರಣದಲ್ಲಿ ಕೊಲೆ ಮಾಡಲು ಬಂದವನೇ ಕೊಲೆಯಾದ ಘಟನೆಯಲ್ಲೂ ಶಿಕ್ಷೆ ಪ್ರಕಟವಾಗಿದೆ. 2019 ರ ಎಪ್ರಿಲ್ 23 ರಂದು ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ ಕರಿಗುಂಡಿಯ ಹೆಲಿಕಾಪ್ಟರ್ ಗ್ರೌಂಡ್ ನಲ್ಲಿ ತಲವಾರು, ಮಚ್ಚು ಝಳಪಳಿಸಿತ್ತು. ಬಿ.ಜೆ.ಪಿ ಅಲ್ಪ ಸಂಖ್ಯಾತರ ಮೋರ್ಚಾದ ಅಧ್ಯಕ್ಷ ಅನೀಶ್ ತಶೀಲ್ದಾರ್‌ ಅವರನ್ನು ಭೀಕರವಾಗಿ ಹತ್ಯೆ ಮಾಡಬೇಕೆಂಬ ಉದ್ದೇಶದಿಂದ ಎಸ್‌.ಡಿ.ಪಿ.ಐ ಕಾರ್ಯಕರ್ತರು ಹೊಂಚು ಹಾಕಿ ದಾಳಿ ನಡೆಸಿದ್ದರು.

ಈ ವೇಳೆ ನಡೆದ ಗುಂಪು ಘರ್ಷಣೆಯಲ್ಲಿ ಬಿ.ಜೆ.ಪಿ ಮುಖಂಡ ಅನೀಸ್ ತಶೀಲ್ದಾರ್ ಗೆ ತಲೆ, ಮೈ ಕೈಗೆಲ್ಲಾ ಗಂಭೀರ ಗಾಯಗಳಾಗಿತ್ತು. ಅನೀಸ್ ತಶೀಲ್ದಾರ್ ಅವರನ್ನು ಕೊಲ್ಲಲೇ ಬೇಕೆಂದು ಬೀಸಿದ್ದ ಚಾಕು ಎಸ್.ಡಿ.ಪಿ.ಐ ಕಾರ್ಯಕರ್ತನಾಗಿದ್ದ ಅಸ್ಲಮ್ ಬಾಬಾ ಶೇಖ್ ಗೆ ತಾಗಿ, ಆತ ಮೃತಪಟ್ಟಿದ್ದ. ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಶಿರಸಿ ಪೊಲೀಸರು ಅಂದೇ ಹೆಡೆಮುರಿಕಟ್ಟಿದ್ದರು.‌

ಈ ಪ್ರಕರಣದಲ್ಲಿ 7 ವರ್ಷಗಳ ಬಳಿಕ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು, 304 (ಕೊಲೆ) ಪ್ರಕರಣದ ಅಪರಾಧಿ ಮಹಮದ್ ಫಾರುಖ್ ಪಟೇಲ್ ಎಂಬಾತನಿಗೆ 10 ವರ್ಷ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೇ, ಈ ಕೊಲೆ ಅಪರಾಧಿ ಮಹಮದ್ ಫಾರುಖ್ ಪಟೇಲ್ 50 ಸಾವಿರ ರೂ. ಪರಿಹಾರವನ್ನು ಮೃತ ಅಸ್ಲಮ್ ಬಾಬಾ ಶೇಖ್ ತಾಯಿಗೆ ನೀಡುವಂತೆ ಕೋರ್ಟ್ ಆದೇಶ ನೀಡಿದೆ.

ಅನೀಸ್ ತಶೀಲ್ದಾರ್ ಅವರನ್ನು ಕೊಲ್ಲಲು ತಂಡದೊಂದಿಗೆ ಬಂದಿದ್ದ ಫಾರುಕ್, ಗಲಾಟೆಯಲ್ಲಿ ತಪ್ಪಿ ಅಸ್ಲಮ್ ಬಾಬಾ ಶೇಖ್‌ಗೆ ಚಾಕು ಹಾಕಿದ್ದ. ಇನ್ನು ಇದೇ ಪ್ರಕರಣದಲ್ಲಿ ಸೆಕ್ಷನ್ 307 ಅಡಿಯಲ್ಲಿ (ಕೊಲೆ ಯತ್ನ) ಆರು ಮಂದಿ ಅಪರಾಧಿಗಳಾದ ಮಹಮದ್ ಫಾರುಖ್, ಮಹಮದ್ ಸಲೀಮ್, ಸರ್ಫರಾಜ್ ಪಟೇಲ್, ಎಸ್‌.ಡಿ.ಪಿ.ಐ ಜಿಲ್ಲಾ ಉಪಾಧ್ಯಕ್ಷ ಮಹಮದ್ ಆರೀಫ್ ಕರ್ಜಗಿ, ನಿಸ್ಸಾರ್ ಅಹಮದ್ ಶೇಖ್ ಹಾಗೂ ಮೌಸೀನ್ ಹೊನ್ನಾವರ ಎಂಬವನಿಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 18 ಸಾವಿರ ರೂ. ದಂಡವನ್ನು ನ್ಯಾಯಲಯ ವಿಧಿಸಿದೆ.

ಅಂದಹಾಗೆ, ಪ್ರಕರಣದ ಆರನೇ ಆರೋಪಿ ಮೌಸೀನ್ ಹೊನ್ನಾವರ ಎನ್.ಐ.ಎಯಿಂದಲೂ ತನಿಖೆಯನ್ನು ಎದರಿಸುತ್ತಿದ್ದು, ಈತ ಕೆ.ಜಿ ಹಳ್ಳಿ ಡಿ.ಜೆ ಹಳ್ಳಿ ಪ್ರಕರಣದ 18 ನೇ ಆರೋಪಿ. ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ ಬಳಿಕ ಗಾಯಾಳು ಸಂತ್ರಸ್ತ ಅನೀಸ್ ತಶೀಲ್ದಾರ್ ಅವರಿಗೆ ಈ ಎಲ್ಲಾ ಆರೋಪಿಗಳು ತಲಾ 10 ಸಾವಿರ ರೂ.ನಂತೆ 60 ಸಾವಿರ ರೂ. ನೀಡುವಂತೆಯೂ ಶಿರಸಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಪ್ರಕರಣದ ಬಳಿಕ ತನಗೆ ಜೀವ ಬೆದರಿಕೆ ಬರಬಹುದಾದ ಸಂಭವವಿದ್ದ ನನಗೆ ಸೂಕ್ತ ಭದ್ರತೆ ನೀಡುವಂತೆ ಅನಿಶ್ ತಶಿಲ್ದಾರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.