Karwar| ಕಸ ವಿಲೇವಾರಿಗಾಗಿ ಎರಡು ಅತ್ಯಾಧುನಿಕ ವಾಹನಗಳಿದ್ದರೂ ಬಳಕೆ ಮಾಡದ ಚಿತ್ತಾಕುಲ ಪಂಚಾಯಿತಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಅಧ್ಯಕ್ಷ ಅಕ್ಷಯ ಎಸ್.ಬಿ ತೀವ್ರ ಕಿಡಿ ಕಾರಿದ್ದು, ಪಂಚಾಯ್ತಿ ನಿರ್ಲಕ್ಷ್ಯ ಧೋರಣೆ ಖಂಡಿಸಿ ಜುಲೈ 2 ರಂದು ಸದಾಶಿವಗಡ ಬಂದ್‌ಗೆ ಕರೆ ನೀಡಲಾಗಿದೆ ಎಂದರು.
ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಸ ವಿಲೇವಾರಿ ಸಮಸ್ಯೆಯಿಂದ ಚಿತ್ತಾಕುಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತೆ ಕಂಗೆಟ್ಟಿದ್ದಾರೆ ಎಂದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಈ ಕಸದ ಸಮಸ್ಯೆ ಇಡೀ ಸದಾಶಿವಗಡವನ್ನು ಕಾಡುತ್ತಿದೆ. ಮನೆ ಮನೆಗಳಿಂದ ಬಂದು ಕಸ ಎತ್ತುವವರೇ ಇಲ್ಲವಾಗಿದ್ದಾರೆ. ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯರು, ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಅನಿವಾರ್ಯವಾಗಿ ಹಾದಿ ಬೀದಿಯಲ್ಲಿ ಕಸ ಎಸೆಯುತ್ತಿದ್ದಾರೆ. ಅಲ್ಲದೇ ರಸ್ತೆ ಬದಿಯಲ್ಲಿ ವೈದ್ಯಕೀಯ ತ್ಯಾಜ್ಯ ಸಿರಿಂಜ್, ಡೈಪರ್‌ಗಳು ರಾಶಿ ಬಿದ್ದಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನು ವಾಹನವಿದ್ದರೂ ಪಂಚಾಯ್ತಿಯು ತ್ಯಾಜ್ಯ ಬಳಕೆಗೆ ಬಳಸುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ ಅಕ್ಷಯ್, ಸರ್ಕಾರ ಹೊಚ್ಚ ಹೊಸದಾದ ವಾಹನವನ್ನು ಸರ್ಕಾರ ನೀಡಿದೆ. ಅದನ್ನು ಬಳಕೆ ಮಾಡದೇ ಶೋ ಪೀಸ್ ನಂತೆಯೇ ಹಾಗೆಯೇ ಇಡಲಾಗಿದೆ ಎಂದು ಟೀಕಿಸಿದರು.
ಕಸ ಸಮಸ್ಯೆ ಬಗ್ಗೆ ಹಲವಾರು ಬಾರಿ ಪಂಚಾಯಿತಿ ಸೇರಿದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಯಾವುದೇ ಕ್ರಮವಾಗಿಲ್ಲ. ಶಾಸಕ ಸೈಲ್ ಮನೆ ಆ ಭಾಗದಲ್ಲೇ ಇದ್ದರೂ ಶಾಸಕರು ಸಹ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಟೀಕಿಸಿದ್ದಾರೆ.
ಹೀಗಾಗಿ ಜನತೆಯ ಕಸ ಸಮಸ್ಯೆಯನ್ನು ಶೀಘ್ರ ಪರಿಹಾರಕ್ಕಾಗಿ ಒತ್ತಾಯಿಸಿ
ಜುಲೈ 2 ರಂದು ಸಂಜೆ 6ರವರೆಗೆ ಸದಾಶಿವಗಡ ಬಂದ್ ಗೆ ಕರೆ ನೀಡಿದ್ದೇವೆ. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡುವಂತೆ ವ್ಯಾಪಾರಿಗಳಲ್ಲಿ, ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ ಎಂದು ಕರವೇ ಅಕ್ಷಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹೇಶ್ ಬಾಂದೇಕರ, ಸಂದೀಪ ಕಲ್ಗುಟಕರ, ಅರುಣ ನಾಯ್ಕ, ಹಸನ್ ಶೇಖ್, ಗಜಾನನ ಕದಂ, ಅಶೋಕ ರಾಣೆ, ರೂಪೇಶ ನಾಯ್ಕ, ಅಮೀನ್ ನದಾಫ್, ಕೃಷ್ಣಾ ಬಂಟ ಹಾಗೂ ಮಾರುತಿ ರಾಯ್ಕರ್ ಸೇರಿದಂತೆ ಹಲವರು ಇದ್ದರು.
