Mundagod| ತಾಲೂಕಿನ ಜೋಗೆಶ್ವರಹಳ್ಳ ಗ್ರಾಮದಲ್ಲಿ ವಿದ್ಯುತ್‌ ತಂತಿ ಸ್ಫರ್ಶಿಸಿ ಯುವಕ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಹೆಸ್ಕಾಂ ಸಿಬ್ಬಂದಿಗಳ ಮೇಲೆ ಮುಂಡಗೋಡ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿನ್ನೆ ರವಿವಾರ ಸಂಜೆ ಜೋಗೆಶ್ವರಹಳ್ಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಜಾನು ಸಾವು ಕೊಕ್ಕರೆ (26) ಎಂಬ ಯುವಕ ಸಾವನ್ನಪ್ಪಿದ್ದ. ಸ್ಥಳೀಯ ದೇವಸ್ಥಾನದ ಅರ್ಚಕ ಸಹ ಆಗಿದ್ದ ಮೃತ ಜಾನು, ಹತ್ತಿರದ ಶಾಲೆಯ ಕಂಪೌಂಡ್‌ನಲ್ಲಿದ್ದ ಹೂವುಗಳನ್ನು ಕೀಳಲು ಹೋದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಬಿದ್ದು ಮೃತಪಟ್ಟಿದ್ದರು.

ಹೆಸ್ಕಾಂ ನಿರ್ಲಕ್ಷ್ಯದಿಂದ ಸಹೋದರನ ಸಾವು…

ಈ ಬಗ್ಗೆ ಮೃತ ವ್ಯಕ್ತಿಯ ಸಹೋದರ ವಿಠ್ಠಲ ಕೊಕರೆ ಹೆಸ್ಕಾಂ ನಿರ್ಲಕ್ಷವೇ ತನ್ನ ಅಣ್ಣನ ಸಾವಿಗೆ ಕಾರಣ ಎಂದು ದೂರಿದ್ದಾರೆ. ವಿದ್ಯುತ್ ಕಂಬ ಹಾಗೂ ತಂತಿಗೆ ವಿದ್ಯುತ್ ಪ್ರಸರಣವಾಗಿರುವ ಬಗ್ಗೆ ತಿಳಿದಿದ್ದರೂ ಸಹ ಸಂಬಂಧಪಟ್ಟ ಹೆಸ್ಕಾಂ ಸಿಬ್ಬಂದಿಗಳು ಸರಿಯಾದ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇವರ ನಿರ್ಲಕ್ಷತನದಿಂದ ತನ್ನ ಸಹೋದರನ ಸಾವು ಸಂಬಂಧಿಸಿದೆ ಎಂದು ಹೆಸ್ಕಾಂ ಲೈನ್‌ ಮ್ಯಾನ್‌ ಹಾಗೂ ಸೆಕ್ಷನ್‌ ಆಫೀಸರ್‌ ಮೇಲೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಖ್ಯೆ 131/2026, ಕಲಂ 106(1) ಬಿಎನ್‌ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.