ಕಾರವಾರ: ಹಳದಿ ಬೋರ್ಡ್ ವಾಹನಗಳನ್ನು ಮಾತ್ರ ಬಾಡಿಗೆ ಸೇವೆಗೆ ಬಳಕೆ ಮಾಡಬೇಕೆಂಬ ನಿಯಮವನ್ನು ಮೀರಿ, ಭಟ್ಕಳ ತಾಲೂಕಿನಲ್ಲಿ ಖಾಸಗಿ ವಾಹನಗಳನ್ನು (ಬಿಳಿ ಬೊರ್ಡ) ಬಾಡಿಗೆ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಟ್ಯಾಕ್ಸಿ ಮಾಲಕರಿಗೆ ನಷ್ಟವಾಗುತ್ತಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಭಟ್ಕಳ ಟ್ಯಾಕ್ಸಿ ಚಾಲಕ ಮಾಲಕರ ಸಂಘ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕಾರವಾರದ ಪತ್ರಿಕಾ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಘದ ಸದಸ್ಯರು, ಖಾಸಗಿ ವಾಹನಗಳಲ್ಲಿ (ಬಿಳಿ ಬೋರ್ಡ್) ಪ್ರಯಾಣಿಕರನ್ನು ಬಾಡಿಗೆಗೆ ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ಸಾಗಿಸುವುದು ಭಾರತೀಯ ಮೋಟಾರು ವಾಹನ ಕಾಯಿದೆಯಡಿ ಕಾನೂನುಬಾಹಿರವಾಗಿದೆ. ಇಂತಹ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಅಪಾಯಕಾರಿ ಮತ್ತು ವಿಮಾ ರಕ್ಷಣೆಯಿಲ್ಲದ ಕಾರಣ ಅಪಘಾತ ಸಂಭವಿಸಿದರೆ ಪರಿಹಾರ ಪಡೆಯಲು ಕಷ್ಟವಾಗುತ್ತದೆ. ಆದರೆ ಭಟ್ಕಳದಲ್ಲಿ ಬಿಳಿ ಬೊರ್ಡ್ ನ ಖಾಸಗಿ ವಾಹನಗಳಲ್ಲಿ ಗೋವಾ ಮತ್ತು ಅಂತರ ರಾಜ್ಯಗಳಿಗೆ ಬಾಡಿಗೆ ಹೋಗುತ್ತಿದ್ದಾರೆ. ಇದರಿಂದ ನಿಯಮಾನುಸಾರ ತೆರಿಗೆ, ಇನ್ಸುರೆನ್ಸ್ ತುಂಬುವ ಟ್ಯಾಕ್ಸಿ ಮಾಲಕರಿಗೆ ಆರ್ಥಿಕವಾಗಿ ತುಂಬಾ ನಷ್ಟವಾಗುತ್ತಿದೆ ಎಂದು ಸದಸ್ಯರು ನೋವು ತೊಡಿಕೊಂಡಿದ್ದಾರೆ.
ಇದಲ್ಲದೇ ಭಟ್ಕಳದಲ್ಲಿ ಆಟೋ ರಿಕ್ಷಾದವರು ನಗರ ವ್ಯಾಪ್ತಿಯ ಏಳು ಕೀಮಿ ಒಳಗೆ ಮಾತ್ರ ಸಂಚರಿಸಬೇಕೆಂಬ ನಿಯಮ ಮೀರಿ ಜಿಲ್ಲೆ ಹಾಗೂ ಹೊರ ಜಿಲ್ಲೆಗೆ ಬಾಡಿಗೆ ಹೋಗುತ್ತಿದ್ದಾರೆ ಎಂದು ದೂರಿದರು.
ಕೆಲವು ಸ್ಥಳೀಯ ರಿಕ್ಷಾದವರು ಹಾಗೂ ಖಾಸಗಿ ವಾಹನದವರು ದೂರದ ಊರುಗಳಿಗೆ ಬಾಡಿಗೆ ಹೋಗುತ್ತಿರುವುದರಿಂದ ಟ್ಯಾಕ್ಸಿಗಳನ್ನು ನಂಬಿ, ದುಡಿಮೆಮಾಡಿ ನಮ್ಮ ಕುಂಟುಂಬದ ಜೀವನ ರ್ನಿವಹಣೆ ತುಂಬಾ ಕಷ್ಟವಾಗಿದೆ. ಈಗಾಗಲೇ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಬಾಡಿಗೆ ಕಡಿಮೆಯಾಗಿ ಟ್ಯಾಕ್ಸಿ ಮಾಲಕರು ಆರ್ಥಿಕವಾಗಿ ತೊಂದರೆಯಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಟ್ಯಾಕ್ಸಿ ಚಾಲಕರ, ಮಾಲಕರ ಸಮಸ್ಯೆಯನ್ನು ಅರಿತು ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಭಟ್ಕಳ ಟ್ಯಾಕ್ಸಿ ಚಾಲಕ ಮಾಲಕರ ಸಂಘ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣೇಶ ದೇವಾಡಿಗ, ಉಪಾಧ್ಯಕ್ಷ ಮೊಹಮ್ಮದ್ ಮುಷ್ತಾಕ್, ಪ್ರಧಾನ ಕಾರ್ಯದರ್ಶಿ ಜಗದೀಶ ನಾಯ್ಕ, ಸದಸ್ಯರುಗಳಾದ ರಮೇಶ ನಾಯ್ಕ, ಪೈಜಲ್ ಸಯ್ಯದ್, ಶ್ರೀನಿವಾಸ ನಾಯ್ಕ, ರಾಘು ಶೇಟ್ ಸೇರಿದಂತೆ ಹಲವರು ಇದ್ದರು.
