Karwar| ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ ಎಂದು ಪ್ರಾರ್ಥನೆ ಮಾಡುವ ವ್ಯಕ್ತಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ನೀಡಿ ವಿವಾದ ಸೃಷ್ಟಿಸಿದ ಘಟನೆ ಉತ್ತರಕನ್ನಡ ಕಾಂಗ್ರೆಸ್ ನಲ್ಲಿ ನಡೆದಿದೆ.

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಪರಮಾಪ್ತ ಹಾಗೂ
ಸಂಘದ ಕಾರ್ಯಕರ್ತ ಸಿದ್ಧವಿರೇಶ ಮೇಘರಾಜು ಎಂಬುವವರೇ ಕಾಂಗ್ರೆಸ್ ಹುದ್ದೆ ಪಡೆದವರು. ಇವರನ್ನು ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಗಿತ್ತು. ಸಂಘ ಪರಿವಾರದ ವ್ಯಕ್ತಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ನೀಡಿದ ಬಗ್ಗೆ ಪಕ್ಷದ ವಲಯದಲ್ಲಿ ಸಾಕಷ್ಟು ಅಸಮಾಧಾನ ಬುಗಿಲೆದ್ದಿದೆ.
ಆರ್.ಎಸ್.ಎಸ್ ಅನ್ನು ವಿಷ ಸರ್ಪಕ್ಕೆ ಹೋಲಿಸಿ ಟೀಕೆ ಮಾಡುತಿದ್ದ ಕಾಂಗ್ರೆಸ್ ನಡೆಗೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿಗೆ ದೂರು ನೀಡಿದ್ದರು. ಕೊನೆಗೆ ಎಚ್ಚೆತ್ತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಮಧ್ಯಪ್ರವೇಶಿಸಿ ಈ ಆಯ್ಕೆಯನ್ನು ತಡೆ ಹಿಡಿದಿದ್ದಾರೆ.
ಒಟ್ಟಾರೆ ಸಂಘದ ಪರಿವಾರ ವ್ಯಕ್ತಿಗೆ ಕಾಂಗ್ರೆಸ್ ಹುದ್ದೆ ನೀಡಿದ್ದು ಕೇವಲ ಕಾಂಗ್ರೆಸ್ ಕಾರ್ಯಕರ್ತರಲ್ಲಷ್ಟೇ ಅಲ್ಲ ಬಿಜೆಪಿಯವರನ್ನು ಹೌಹಾರಿಸಿದೆ. ತಮ್ಮ ಮಾತೃ ಸಂಘಟನೆಯ ವ್ಯಕ್ತಿಗೆ ಕಾಂಗ್ರೆಸ್ ಹೈಜಾಕ್ ಮಾಡಿ, ಪಟ್ಟ ನೀಡಿದಲ್ಲದೇ ಸಂಘದ ಶಿಸ್ತನ್ನು ಕಾಂಗ್ರೆಸ್ ನಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ಬಿಜೆಪಿಯ ಕೆಲ ಕಾರ್ಯಕರ್ತರು ಲೇವಡಿ ಮಾಡಿದ್ದು ಮಾತ್ರ ಸುಳ್ಳಲ್ಲ ಅಂತೆ!
