ಸಕ್ರೀಯ ರಾಜಕಾರಣದಿಂದ ದೂರವುಳಿದಿರುವ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಸಕ್ರೀಯ ರಾಜಕಾರಣಕ್ಕೆ ಬರುತ್ತಾರೆ ಎನ್ನುವ ವಂದಂತಿ ಹಬ್ಬಿದ್ದು ಈ ವದಂತಿಗೆ ಪುಷ್ಠಿ ಎನ್ನುವಂತೆ ಅನಂತ ಕುಮಾರ ಹೆಗಡೆ ಅವರ ರೀ ಎಂಟ್ರಿಗೆ ಅಖಾಡ ಸಿದ್ದವಾಗಿದೆ.

ಈ ರೀ ಎಂಟ್ರಿ ಭಟ್ಕಳದಿಂದಲೇ ಆದರೆ ಹೇಗಿರಲಿದೆ ಎನ್ನುವುದು ಈಗ ಅವರ ಬೆಂಬಲಿಗರಲ್ಲಿ ಬಹು ಚರ್ಚಿತ ವಿಷಯವಾಗಿದೆ. ಮಾರ್ಚ್ 08 ರಂದು ಭಟ್ಕಳದ ಹಿಂದೂ ಸಮಾವೇಶದ ದಿಕ್ಸೂಚಿ ಭಾಷಣಕಾರರಾಗಿ ಅನಂತ ಕುಮಾರ ಹೆಗಡೆ ಆಗಮಿಸುತ್ತಾರೆ ಎಂದು ತಿಳಿದುಬಂದಿದೆ.

ಈಗ  ಹೌದು ಭಟ್ಕಳ ಅನಂತ ಕುಮಾರ ಹೆಗಡೆ ಪಾಲಿನ ರಾಜಕೀಯ ಜನ್ಮ ಭೂಮಿ. 1993 ರಲ್ಲಿ ರಾಮನವಮಿ ರಥಾಯಾತ್ರೆಯ ಮೇಲೆ ಕಲ್ಲು ತೂರಾಟದಿಂದ ಪ್ರಾರಂಭಗೊಂಡ ಭಟ್ಕಳ ಕೋಮುಗಲಭೆಯಲ್ಲಿ ಸತತ ನಾಲ್ಕು ವರ್ಷಗಳ ಕಾಲ ಭಟ್ಕಳ ಬೂದಿ ಮುಚ್ಚಿದ ಕೆಂಡದಂತಿತ್ತು.

ಈ ಸಂದರ್ಭದಲ್ಲಿ ಹಿಂದೂಗಳ ಮೇಲಿನ ಹಲ್ಲೆಯನ್ನು ಖಂಡಿಸಿ ರಣೋತ್ಸಾಹದಿಂದ ಪ್ರತಿಭಟನೆ ನಡೆಸಿ ಸಂಘಪರಿವಾರದ ನೀಲಿಗಣ್ಣಿನ ಹುಡಗನಾಗಿ ಬೆಳೆದು ಬಂದಿದ್ದರು ಅನಂತಕುಮಾರ ಹೆಗಡೆ.

ಈ ಉತ್ಸಾಹಿ ಯುವಕನಲ್ಲಿನ ಪ್ರಕರ ಹಿಂದುತ್ವವಾದ, ಧರ್ಮನಿಷ್ಠೆ ಹಾಗೂ ಭಾಷೆಮೇಲಿನ ಹಿಡಿತವನ್ನ ಗಮನಿಸಿದ ಅಂದಿನ ಸಂಘ ಪರಿವಾರದ ನಾಯಕರು 1996 ರ ಕೆನರಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ನೀಡಿ ಸಂಸದರನ್ನಾಗಿ ಆಯ್ಕೆಮಾಡುವಲ್ಲಿ ಸಹಕರಿಸಿದ್ದರು.

ಅಂದಿನಿಂದ ಆರು ಭಾರಿ ಉತ್ತರಕನ್ನಡ(ಈ ಮೊದಲು ಕೆನರಾ) ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ, ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರಸರ್ಕಾರದ ಮಂತ್ರಿಯೂ ಆಗಿ ಕಾರ್ಯ ನಿರ್ವಹಿಸಿದ್ದರು. 

ಬದಲಾದ ಸನ್ನಿವೇಶದಲ್ಲಿ ಸ್ಥಳೀಯ ಹಾಗೂ ರಾಜ್ಯ ನಾಯಕರೊಂದಿಗೆ ಮುನಿಸಿಕೊಂಡಿದ್ದ ಅನಂತಕುಮಾರ್ ಹೆಗಡೆ ಅವರಿಗೆ ಕಳೆದ ಭಾರಿಯ ಲೋಕಸಭಾ ಟಿಕೇಟ್ ತಪ್ಪಿಸಿ ಅವರ ಸ್ವಪಕ್ಷದ ಪ್ರತಿಸ್ಪರ್ಧಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮಣೆ ಹಾಕಲಾಗಿತ್ತು.

ಇದರಿಂದ ಕೋಪಗೊಂಡ ಅನಂತಕುಮಾರ್ ಸಕ್ರೀಯ ರಾಜಕಾರಣದಿಂದ ದೂರವುಳಿದಿದ್ದರು. ಬಿಜೆಪಿ ಹೇಳಿಕೇಳಿ  ಸೈದಾಂತಿಕ ಹಿನ್ನೆಲೆಯಿರುವ ಪಕ್ಷ. ನಾನಾ ಕಾರಣವೊಡ್ಡಿ ಪ್ರಖರ ಹಿಂದುತ್ವದ ಪ್ರತಿಪಾದಕ ನಾಯಕರನ್ನು ಈಗಾಗಲೇ ಬಿಜೆಪಿ ಈಗಾಗಲೇ ಮೂಲೆಗುಂಪು ಮಾಡಿಯಾಗಿದೆ.

ಹಿಂದುತ್ವ ಪ್ರತಿಪಾದಕ ನಾಯಕನಿಲ್ಲದ ಪಕ್ಷ ಈಗ ನಾವಿಕನಿಲ್ಲದ ನೌಕೆಯಂತಾಗಿದೆ ಎಂದು ಮನಗಂಡ ಸಂಘಪರಿವಾರದ ನಾಯಕರು, ಮುಂಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಬಿಜೆಪಿಯನ್ನು ಪುನಃ ಕಟ್ಟಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಆ ಹಿನ್ನಲೆಯಲ್ಲಿ ಸಾಮಾಜಿಕ ಹಾಗೂ ರಾಜಕೀಯ ಜೀವನದಿಂದ ದೂರವುಳಿದಿದ್ದ ಮಾಜಿ ಕೇಂದ್ರ ಸಚಿವರಾದ ಅನಂತ ಕುಮಾರ ಹೆಗಡೆ ಅವರನ್ನು ಭಟ್ಕಳದಲ್ಲಿ ನಡೆಯುವ ಭಟ್ಕಳ ನಗರ ಹಿಂದೂ ಸಂಗಮ ಹೆಸರಿನ ಕಾರ್ಯಕ್ರಮಕ್ಕೆ ದಿಕ್ಸೂಚಿ ಬಾಷಣಕಾರರಾಗಿ ಆಹ್ವಾನಿಸಿದ್ದಾರೆ. 

ಸುಮಾರು ಒಂದುವರೆ ವರ್ಷಗಳಿಂದ ಅಜ್ಞಾತವಾಸದಲ್ಲಿರುವ ಅನಂತಕುಮಾರ್ ಹೆಗಡೆ ಅವರು ಭಟ್ಕಳದಲ್ಲಿ ನಡೆಯುವ ಹಿಂದೂ ಸಮ್ಮೇಳನದಲ್ಲಿ ಯಾವ ರೀತಿ ಅಬ್ಬರಿಸಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.