Karwar| ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಮೇಲೆ ಅಂಕೋಲಾದಲ್ಲಿ ನಡೆದ ಕೊಲೆ ಯತ್ನ ಪೂರ್ವನಿಯೋಜಿತ ‘ಸುಪಾರಿ’ ಸಂಚು ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಘಟನೆಗೆ ಸಂಬಂಧಿಸಿ ಸಾರ್ವಜನಿಕರಿಂದ ಹಲವು ಗಂಭೀರ ಪ್ರಶ್ನೆಗಳು ಉದ್ಭವಿಸಿದೆ.

ಬುಧವಾರ ಹಾಡುಹಗಲೇ ಅಂಕೋಲಾದ ಜನನಿಬಿಡ ಪ್ರದೇಶವಾದ ಶ್ರೀ ಕಣಕಣೇಶ್ವರ ದೇವಸ್ಥಾನದ ಬಳಿ ನಡೆದ ದಾಳಿ ಕೇವಲ ಸಾಮಾನ್ಯ ವೈಮನಸ್ಸಿನ ಕೃತ್ಯವಲ್ಲ ಎಂಬುದು ಮೂಲಗಳಿಂದ ಕೇಳಿಬಂದಿದೆ. ದುಷ್ಕರ್ಮಿಗಳು ಕಾರಿನಲ್ಲಿ ಬಂದು ಟಾರ್ಗೆಟ್ ಮಾಡಿದ ರೀತಿ, ಬಳಿಕ ಪೂರ್ವ ಯೋಜಿತವಾಗಿ ಪರಾರಿಯಾಗಲು ನಡೆಸಿದ ಯತ್ನ ಮುಂತಾದವು ಸಂಪೂರ್ಣವಾಗಿ ಯೋಜನಾತ್ಮಕ ದಾಳಿ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ಆರೋಪಿಗಳು ಬಿಹಾರ ಮೂಲದವರು. ಘಟನೆಗೂ ಮುನ್ನ ಮೂರು ದಿನಗಳ ಕಾಲ ಅಂಕೋಲಾದಲ್ಲಿ ಆರೋಪಿಗಳು ತಂಗಿದ್ದು, ಗೋವಾ ನೋಂದಣಿ ವಾಹನ ಬಳಕೆ, ದಾಳಿ ಬಳಿಕ ಗೋವಾಕ್ಕೆ ಪರಾರಿಯಾಗುವ ಯತ್ನ ಈ ಎಲ್ಲಾ ಅಂಶಗಳು ಸ್ಥಳೀಯ ವೈಷಮ್ಯಕ್ಕಿಂತ ಹೊರಗಿನ ಕೈವಾಡದ ಸಾಧ್ಯತೆ ವ್ಯಕ್ತವಾಗಿದೆ.

ಘಟನೆ ನಡೆದ ನಂತರ ಕಾರವಾರದ ಮಾಜಾಳಿ ಚೆಕ್ ಪೊಸ್ಟ್ ಬಳಿ ಪೊಲೀಸರು ನಾಲ್ವರು ಶಂಕಿತ ಬಿಹಾರಿಗಳ‌ನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ತೀವ್ರ ಶೋಧ ಮುಂದುವರಿದಿದೆ ಎನ್ನಲಾಗಿದೆ. ದಾಳಿಗೆ ಬಂದಂತಹ ಒಟ್ಟು ಆರು ಮಂದಿ ಬಂಧಿತರು ‘ಎಕ್ಸಿಕ್ಯೂಟರ್’ ಮಾತ್ರವೇ? ಸುಪಾರಿ ಕೊಟ್ಟವರು ಯಾರು ? ರಾಜಕೀಯ ವೈಷಮ್ಯವೇ? ಅಥವಾ ವೈಯಕ್ತಿಕ ದ್ವೇಷವೇ? ಇವುಗಳಿಗೆ ಉತ್ತರ ಇನ್ನು ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ.

ಗೋಪಾಲಕೃಷ್ಣ ನಾಯಕರು ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರು. ಅಲ್ಲದೇ, ಗೃಹ ಸಚಿವ ಪರಮೇಶ್ವರ ಆಪ್ತ  ಬಳಗದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಈ ದಾಳಿಗೆ ರಾಜಕೀಯ ಪೈಪೋಟಿ ಕಾರಣವೇ? ಸ್ಥಳೀಯ ಮಟ್ಟದ ಗುತ್ತಿಗೆ, ವ್ಯಾಪಾರ ವಿವಾದವೇ? ಅಥವಾ ವೈಯಕ್ತಿಕ ದ್ವೇಷವೇ? ಎಂಬ ಮೂರು ಪ್ರಮುಖ ಕೋನಗಳಲ್ಲಿ ಪೊಲೀಸರ ತನಿಖೆ ಸಾಗುತ್ತಿದೆ.

2013ರ ಡಿಸೆಂಬರ್ 21ರಂದು ಅಂಕೋಲಾದಲ್ಲೇ ನಡೆದ ಹಿರಿಯ ಸಹಕಾರಿ ಧುರೀಣ, ಉದ್ಯಮಿ ಆರ್.ಎನ್.ನಾಯಕ ಹತ್ಯೆಯ ನಂತರ ಬುಧವಾರ ನಡೆದ ಈ ದಾಳಿಯು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಬಂಧಿತ ಆರೋಪಿಗಳು ಕೇವಲ ‘ಸುಪಾರಿ’ ಪಡೆದವರಷ್ಟೇ ಎಂದೆನ್ನಲಾಗಿದ್ದು, ನಿಜವಾದ ಸೂತ್ರಧಾರಿ, ಸುಪಾರಿ ನೀಡಿದವರು ಕೈ ತೆರೆಮರೆಯಲ್ಲೇ ಓಡಾಡುತ್ತಿದೆ. ತೆರೆ ಹಿಂದಿರುವ ಕಾಣದ ಕೈಗಳನ್ನು ಎಳೆದು ಪ್ರಮುಖ ಆರೋಪಿಗಳ‌ನ್ನು ಬಂಧಿಸುವುದು ಇದೀಗ ಪೋಲಿಸರ ಮುಂದಿರುವ ಸವಾಲು.