ಉತ್ತರಕನ್ನಡ ಜಿಲ್ಲೆಯಲ್ಲಿ ರೆಸಾರ್ಟ್, ಹೋಮ್ ಸ್ಟೇಗಳು ನಾಯಿ ಕೊಡೆಯಂತೆ ಹಬ್ಬುತ್ತಿದ್ದು, ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ರೆಸಾರ್ಟ್ (resort) ಹಾಗೂ ಹೋಮ್ ಸ್ಟೇ (home stay) ವಿರುದ್ಧ ಸಾಕಷ್ಟು ದೂರುಗಳು ಜನರಿಂದ ಕೇಳಿಬಂದಿದ್ದವು.
ಜಿಲ್ಲೆಯ ಕರಾವಳಿ ತಾಲೂಕಿನ ಗೋಕರ್ಣ, ಕುಮಟಾ ಹಾಗೂ ಹೊನ್ನಾವರದಲ್ಲಿ ಸಿಆರ್‌ಝಡ್ (CRZ)ನಿಯಮ ಉಲ್ಲಂಘನೆ ಮಾಡಿ ಸಾವಿರಾರು ಹೋಮ್ ಸ್ಟೇಗಳು ನಿರ್ಮಾಣವಾಗಿದ್ದು, ಈ ಅಕ್ರಮ ಕಟ್ಟಡಗಳ (illegal buildings) ತೆರವಿಗೆ ಜನರು, ಹೋರಾಟಗಾರರಿಂದ ಆಗ್ರಹ ಸಹಃ ಕೇಳಿಬಂದಿತ್ತು.
ಭಾರೀ ವಿರೋಧದ ಹಿನ್ನೆಲೆಯಲ್ಲಿ ಈಗ ಜಿಲ್ಲಾಡಳಿತ ಗೋಕರ್ಣದ ದುಬ್ಬಣಸಶಿಯಲ್ಲಿನ ಅಕ್ರಮ ಹೋಮ್ ಸ್ಟೇ ಗಳನ್ನು ತೆರವಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ.
‘ದುಬ್ಬಣಸಶಿ ಗ್ರಾಮದಲ್ಲಿ CRZ-1 (ಸಮುದ್ರದ ಉಬ್ಬರ ಬಿಂದುವಿನಿಂದ ಕೇವಲ 100 ಮೀಟರ್ ಒಳಗಡೆ )ನಲ್ಲಿ ಸಾಕಷ್ಟು ರೆಸಾರ್ಟ್ ಗಳು ತಲೆಯೆತ್ತಿವೆ. ಅಸಲಿಗೆ ಈ ರೆಸಾರ್ಟ್ (resort) ಇರುವ ಜಾಗ ರೆಸಾರ್ಟ್ ಮಾಲಕರದ್ದಲ್ಲ, ಬದಲಾಗಿ ಇವು ಸಂಪೂರ್ಣ ಬಂದರು ಇಲಾಖೆಯ ಜಾಗವಾಗಿದೆ. ರೆಸಾರ್ಟ್ ಮಾಲಕರು ತಮ್ಮ ಮಾಲ್ಕಿ ಜಮೀನಿನ ಮುಂದಿನ ಜಾಗವಾದ ಪಡ್ ನಂಬರ್ (ಹರಿದುಬಂದ ಜಾಗ) ಜಾಗದಲ್ಲಿ ಅಕ್ರಮವಾಗಿ ರೆಸಾರ್ಟ್ ಕಟ್ಟಡ ಕಟ್ಟಿದ್ದಾರೆ ” ಎಂದು ಸ್ಥಳೀಯ ಗ್ರಾ.ಪಂ ಸದಸ್ಯರು ದೂರಿದ್ದರು.
ಸಾಕಷ್ಟು ಬಾರಿ ಜಿಲ್ಲಾಡಳಿತದ (district Administration) ಬಳಿ ನಿವೇದನೆ ಮಾಡಿದರೂ ಯಾವುದೇ ಪ್ರಯೋಜನವಾಗದೇ ಇದ್ದಾಗ ಇಲ್ಲಿನ ಸ್ಥಳೀಯರು ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಈ ಅನಧಿಕೃತ ರೆಸಾರ್ಟ್ ತೆರವಿಗೆ ಜಿಲ್ಲಾಡಳಿತ ಮುಂದಾಗಿದೆ. ಸೋಮವಾರ ನಸುಕಿನ ಜಾವ 4 ಗಂಟೆಗೆ ಈ ಎಲ್ಲಾ ಅನಧಿಕೃತ ರೆಸಾರ್ಟ್‌ಗಳ ಎದುರು ಜೆ.ಸಿ.ಬಿ ಶಬ್ದ ಕೇಳಿಬರಲಿದೆ ಎಂದು ತಿಳಿದುಬಂದಿದೆ.
ಅನಧಿಕೃತ ರೆಸಾರ್ಟ್ ಮಾಲಕರಿಗೆ ಈಗಾಗಲೇ ಅಕ್ರಮ ಕಟ್ಟಡ ತೆರವಿಗೆ ನೋಟಿಸ್ (notice) ನೀಡಲಾಗಿದ್ದು, 24 ಗಂಟೆಯ ಒಳಗಡೆ ಕಟ್ಟಡ ತೆರವು ಮಾಡದೇ ಇದ್ದಲ್ಲಿ ಅಧಿಕಾರಿಗಳೇ ಜೆ.ಸಿ.ಬಿ ಬಳಸಿ CRZ ನಿಯಮ ಉಲ್ಲಂಘಿಸಿ ನಿರ್ಮಿಸಿದ ಅನಧಿಕೃತ ಕಟ್ಟಡವನ್ನು ತೆರವುಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟರೆ NDZ (No Development Zone) ಪ್ರದೇಶದಲ್ಲಿ ನಿರ್ಮಾಣವಾದ ಕಟ್ಟಡ ತೆರವಿಗೆ ಈಗ ಜಿಲ್ಲಾಡಳಿತ ಮುಂದಾಗಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿ ಅನಧಿಕೃತ ರೆಸಾರ್ಟ್ ಹಾಗೂ ಹೋಮ್ ಸ್ಟೇ ಗಳ ಸಂಖ್ಯೆಯೇ ಕಡಿಮೆಯಾಗಲಿದೆಯಾ ಎಂಬ ವಿಚಾರ ಕೆಲವರಿಗೆ ಭೀತಿಯಿಂದ ಎದೆ ಢವಢವ ಎನ್ನಲು ಕಾರಣವಾಗಿದ್ದಂತೂ ಸತ್ಯ.
