ಉತ್ತರಕನ್ನಡ (uttarakannada) ಜಿಲ್ಲೆಯ ಕಾರವಾರದ ಕದ್ರಾ ನಿವಾಸಿ ರಿಶೆಲ್ ಕ್ರಿಸ್ತೋದ್ ಡಿಸೋಜಾ (rishel Christod dsouza) ಆತ್ಮಹತ್ಯೆ ಪ್ರಕರಣದ ಆರೋಪಿ ಚಿರಾಗ್ ಕೊಠಾರ್‌ಕರ್‌ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ (arrest).

ಘಟನೆ ನಡೆದ 21 ದಿನಗಳ ಬಳಿಕ ಆರೋಪಿ ಚಿರಾಗ್ ಕೊಠಾರ್‌ಕರ್‌ನನ್ನು ಬಂಧಿಸಿದ ಕಾರವಾರದ ಕದ್ರಾ ಪೊಲೀಸರು ಕಾರವಾರದ ಜಿಲ್ಲಾ ನ್ಯಾಯಾಲಯಕ್ಕೆ (district court) ಶುಕ್ರವಾರ ಹಾಜರುಪಡಿಸಿದ್ದಾರೆ.‌ ಜ.9ರಂದು ಕದ್ರಾ ನಿವಾಸಿ ರಿಶೆಲ್ ಕ್ರಿಸ್ತೋದ್ ಡಿಸೋಜಾ ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಗೆಳೆಯ, ಜೆಡಿಎಸ್ (JDS) ಮುಖಂಡೆ ಚೈತ್ರಾ ಕೊಠಾರ್‌ಕರ್ ಪುತ್ರ ಚಿರಾಗ್ ಕೊಠಾರ್‌ಕರ್, ಕಿರುಕುಳ‌ ನೀಡಿದ್ದಲ್ಲದೇ, ಆಕೆಯನ್ನು ಅತ್ಯಾಚಾರ ಮಾಡಿದ ಕಾರಣಕ್ಕೆ ರಿಶೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ತಾಯಿ ರೀನಾ ಕ್ರಿಸ್ತೋದ್ ಡಿಸೋಜಾ ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಯಲ್ಲಿ ಲೋಪ ಮಾಡಿದ್ದ ಹಿನ್ನೆಲೆ ಕದ್ರಾ ಪಿಎಸ್‌ಐ ಸುನಿಲ್ ಬಂಡಿವಡ್ಡರ್ ಎಂಬವರನ್ನು ಸಸ್ಪೆಂಡ್ ಮಾಡಲಾಗಿತ್ತು. ಬಳಿಕ ಮೃತಳ ಮನೆಯವರ ಮನವಿ ಮೇರೆಗೆ ಎರಡನೇ ಸಲ‌ ಪೋಸ್ಟ್‌ಮಾರ್ಟಂ (postmortem) ಕೂಡಾ ಮಾಡಲಾಗಿದ್ದು, ಸದ್ಯ ರಿಪೋರ್ಟ್‌ ಬರಲು ಬಾಕಿಯಿದೆ. ಎರಡನೇ ರಿಪೋರ್ಟ್ ಬಂದ ಬಳಿಕವಷ್ಟೇ ಮೃತಳಾದ ರಿಶೆಲ್ ಮೇಲೆ ಪೋಷಕರ ಸಂಶಯದಂತೆ ಅತ್ಯಾಚಾರ ಆಗಿದ್ಯಾ ಇಲ್ಲವೇ ಎಂದು ತಿಳಿದುಬರಲಿದೆ. ಇನ್ನು ಪ್ರಕರಣ ಸಂಬಂಧಿಸಿ ಮೃತ ಯುವತಿಯ ಮೊಬೈಲ್ ಕೂಡಾ ಸೀಝ್ ಮಾಡಿದ ಪೊಲೀಸರು ಎಫ್‌ಎಸ್‌ಎಲ್‌ಗೆ (FSL) ಕಳುಹಿಸಿದ್ದಾರೆ.

ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿ ಚಿರಾಗ್‌ನನ್ನು ಬಂಧಿಸಲು ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ 3 ಇನ್ಸ್‌ಪೆಕ್ಟರ್ 6 ಸಬ್ ಇನ್ಸ್‌ಪೆಕ್ಟರ್ ತಂಡ ರಚಿಸಲಾಗಿತ್ತು. ಬೆಂಗಳೂರು, ಪುಣೆ, ಹೈದರಾಬಾದ್ ನಂತರ ಚೆನ್ನೈ‌ಗೆ ತೆರಳಿದ್ದ ಆರೋಪಿ ಚಿರಾಗ್ ಕೊಠಾರ್‌ಕರ್‌ನನ್ನು
ಚೆನ್ನೈನಲ್ಲಿ ಆತನ ಅಂಕಲ್ ನಿತಿನ್ ಗಾಂವ್ಕರ್ ಮನೆಯಿಂದ ಬಂಧಿಸಲಾಗಿದೆ. ಅಲ್ಲದೇ, ಪ್ರಕರಣದಲ್ಲಿ ಆರೋಪಿ ಚಿರಾಗ್ ಚಿಕ್ಕಮ್ಮ ಸುವರ್ಣ, ಅಂಕಲ್ ನಿತಿನ್ ಗಾಂವ್ಕರ್ ವಿರುದ್ಧ ಹಾರ್ಬರಿಂಗ್ (harbouring ಆರೋಪಿ ತಪ್ಪಿಸಿಕೊಳ್ಳಲು ಸಹಾಯ) ಪ್ರಕರಣ ದಾಖಲಿಸಿದ್ದಾರೆ.

ಶುಕ್ರವಾರ ಕಾರವಾರದ ಕದ್ರಾ ಠಾಣಾ ಪೊಲೀಸರಿಂದ ಆರೋಪಿ ಚಿರಾಗ್‌ನನ್ನು ನ್ಯಾಯಾಲಯಕ್ಕೆ ಹಾಜರು ಮಾಡಲಾಗಿದ್ದು,
ಸದ್ಯ 5 ದಿನಗಳ ಕಾಲ ಆರೋಪಿಯನ್ನು ಕಾರವಾರದ ಜಿಲ್ಲಾ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ‌. ಪ್ರಕರಣದಲ್ಲಿ ಆರೋಪಿ ಪರ ವಕೀಲ ನಾಗರಾಜ್ ನಾಯ್ಕ್ ವಾದ ಮಂಡಿಸಿದ್ರೆ, ಸರಕಾರದ ಪರ ವಕೀಲೆ ಸಬೀನಾ ವಾದ ಮಂಡನೆ ಮಾಡಿದ್ದಾರೆ. ಮುಂದಿನ ಫೆ.4ಕ್ಕೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.

ಪ್ರಕರಣ ಸಂಬಂಧಿಸಿ ಶುಕ್ರವಾರ ಸುದ್ದಿಗೋಷ್ಠಿ ಮೂಲಕ ಆರೋಪಿ ಬಂಧನದ ಮಾಹಿತಿ ನೀಡಿದ ಉತ್ತರಕನ್ನಡ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್., ಆರೋಪಿ ತಪ್ಪಿಸಿಕೊಳ್ಳಲು ಪೋಷಕರು ಸೇರಿದಂತೆ ಯಾರ‌್ಯಾರು ಸಹಾಯ ಮಾಡಿದ್ದಾರೆ ಅವರ ವಿರುದ್ಧವೂ ತನಿಖೆ ನಡೆಸಲಾಗುವುದು. ಆರೋಪಿ ಚಿರಾಗ್ ವಿರುದ್ಧ ಸುಳ್ಳು ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ (social media) ಹಂಚಿದವರ ವಿರುದ್ಧ ಒಂದು ಪ್ರಕರಣ ದಾಖಲಿಸಲಾಗಿದೆ. ಮುಂದೆ ಕೂಡಾ ಸುಳ್ಳು ಮಾಹಿತಿ ಹಂಚಿದವರ ವಿರುದ್ಧ ಮಾನಿಟರಿಂಗ್ (monitoring) ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.