ಉಡುಪಿ, ಮೇ.16: ಬಾರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಜನರೇಟರ್ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ನಡೆದಿದೆ. 

ಮೃತ ಕಾರ್ಮಿಕ ರಾತ್ರಿ 12 ಗಂಟೆಯ ತನಕ ಎಲ್ಲರೊಂದಿಗೆ ಮಾತನಾಡುತ್ತ ಸಹಜ ಸ್ಥಿತಿಯಲ್ಲಿದ್ದು, ತಡರಾತ್ರಿ 3 ಗಂಟೆ ಸುಮಾರಿಗೆ ನೇಣುಕುಣಿಕೆಯಲ್ಲಿ ನೇಲುತ್ತಿರುವುದು ಕಂಡುಬಂದಿದೆ. ನಗರ ಪೋಲಿಸ್ ಠಾಣೆಯ‌ ಮುಖ್ಯ ಆರಕ್ಷಕ ಸಂತೋಷ್‌ ಅವರಿಂದ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ತಕ್ಷಣ ಘಟನಾ ಸ್ಥಳಕ್ಕೆ ಬಂದು, ಯುವಕನನ್ನು ಕುಣಿಕೆಯಿಂದ ತೆರವುಗೊಳಿಸಿದ್ದಾರೆ. ತಕ್ಷಣವಾಗಿ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ಯುವಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರಿಂದ ವ್ಯಕ್ತಿ ಮೃತಪಟ್ಟಿರುವುದು ತಿಳಿದುಬಂದಿದೆ. 

ಮೃತ ವ್ಯಕ್ತಿಯ ಹೆಸರು ಅನಿಲ್ ಸಿಂಗ್ (31ವ) ತಂದೆ ಸುರೇಂದ್ರ ಸಿಂಗ್, ಉತ್ತರಖಂಡ ರಾಜ್ಯದ ರುದ್ರಪ್ರಯಾಗದ ನಿವಾಸಿ ಎಂದು‌ ತಿಳಿದುಬಂದಿದೆ. ಶವವನ್ನು‌ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ರಕ್ಷಿಸಿಡಲಾಗಿದೆ. ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.