ಸಾರಿಗೆ Minister Ramalinga Reddy ಅವರು ನಾಲ್ಕು ನಿಗಮಗಳ ಸಾರಿಗೆ ಬಸ್‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ನೇರ ಅಥವಾ ಪರೋಕ್ಷ ಜಾಹೀರಾತುಗಳನ್ನು ತಕ್ಷಣವೇ ನಿಷೇಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಾರ್ವಜನಿಕರ ಈ ತರದ ಜಾಹಿರಾತುಗಳಿಗೆ ಭಾರೀ ವಿರೋಧ ವ್ಯಕ್ತವಾದ ಹಿಮ್ಮೆಲೆಯಲ್ಲಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಅಳವಡಿಸಿರುವ ಜಾಹೀರಾತುಗಳನ್ನು ತೆರವುಗೊಳಿಸಲು ನಿರ್ದೇಶಿಸಿದ್ದಾರೆ.
ಸರ್ಕಾರಿ ಬಸ್‌ಗಳ (Ksrtc) ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಮುದ್ರಿಸುವ ಮೂಲಕ ಸಾರಿಗೆ ಸಂಸ್ಥೆಗಳು ಆದಾಯದ ವ್ಯಾಮೋಹಕ್ಕೆ ಒಳಗಾಗಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಇತ್ತೀಚಿಗೆ ಪ್ರತಿಯೊಂದು ಸರ್ಕಾರಿ ಬಸ್‌ಗಳು ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳು ರಾರಾಜಿಸುತ್ತಿದ್ದವು.

ಈ ಬಗ್ಗೆ ಕನ್ನಡ ಸಂಘಟನೆಗಳು ಸೇರಿದಂತೆ ಜನರು ಕೂಡ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ಸರ್ಕಾರಿ ಬಸ್ಗಳ ಮೇಲಿನ ಜಾಹೀರಾತು ತೆಗೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಲ್ಕು ನಿಗಮಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಆದಾಯ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಸಾರಿಗೆ ಬಸ್ಗಳ ಮೇಲೂ ಜಾಹೀರಾತುಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ ಕೆಲವು ತಂಬಾಕು ಉತ್ಪನ್ನಗಳಿಗೆ ಸಂಬoಧಿಸಿದ ಜಾಹೀರಾತುಗಳೇ ಹೆಚ್ಚಾಗಿದ್ದವು.

ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪರಿಣಾಮವಾಗಿ, ಹಲವು ಕಡೆಗಳಲ್ಲಿ ಬಸ್ಗಳ ಮೇಲಿದ್ದ ಜಾಹೀರಾತುಗಳನ್ನು ಜನರು ಕಿತ್ತು ಹಾಕಿದ್ದ ಘಟನೆಗಳು ನಡೆದಿದ್ದವು. ಇಂಥಹ ಘಟನೆಯಿಂದ ಎಚ್ಚೆತ್ತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 4 ನಿಗಮದ MDಗಳಿಗೆ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರಚಾರ ಮಾಡದಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಾರಿಗೆ ನಿಗಮದ ಬಸ್ಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಕೂಡಲೇ ತೆಗೆದುಹಾಕುವಂತೆ ಸೂಚಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಇನ್ನು ಮುಂದೆ ಪ್ರಚಾರ ಮಾಡದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.