ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ ಆಮಿಷವೊಡ್ಡಿ ಮಹಿಳೆಯೊಬ್ಬರಿಂದ ಬರೋಬ್ಬರಿ 7.02 ಲಕ್ಷ ರೂ. ಹಣ ವಂಚಿಸಿದ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರದ ಹೈ ಚರ್ಚ್ ರಸ್ತೆ ನಿವಾಸಿ ವರ್ಷಾ ವಿ. ರೇವಣಕರ್ (52) ಅವರಿಗೆ ಫೆಬ್ರುವರಿ 24ರಂದು +1(315) 5579043 ಸಂಖ್ಯೆಯಿಂದ ವಾಟ್ಸಪ್ ಮೂಲಕ ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ಬಗ್ಗೆ ಸಂದೇಶ ಬಂದಿತ್ತು. ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಒಂದು ವೆಬ್‌ಸೈಟ್ ತೆರೆದಿದ್ದು, ವಿವಿಧ ಕಂಪೆನಿಗಳ ಉತ್ಪನ್ನಗಳಿಗೆ ರೇಟಿಂಗ್ ಹಾಗೂ ರಿವ್ಯೂ ನೀಡುವ ಕೆಲಸ ಮಾಡುವಂತೆ ತಿಳಿಸಲಾಗಿದೆ.
ಇದಕ್ಕೆ ಒಪ್ಪಿಕೊಂಡ ಬಳಿಕ ಅವರನ್ನು “VIP Elite Membership Group” ಎಂಬ ವಾಟ್ಸಪ್ ಗುಂಪಿಗೆ ಸೇರಿಸಲಾಯಿತು. ಗುಂಪಿನ ಅಡ್ಮಿನ್ ಎಂದು ಹೇಳಿಕೊಂಡಿದ್ದ ಅನನ್ಯಾ ಎಂಬ ಮಹಿಳೆ 8867657704 ಸಂಖ್ಯೆಯಿಂದ ವಾಟ್ಸಪ್ ಕರೆ ಮಾಡಿ ಕೆಲಸ ಮಾಡುವ ವಿಧಾನವನ್ನು ವಿವರಿಸಿದ್ದಾಳೆ.
ನಂತರ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ಹೇಳಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಲಾಗಿದೆ. ಮೊದಲಿಗೆ 200 ರೂ.ಹೂಡಿಕೆ ಮಾಡಿದ್ದಾಗ 300 ರೂ. ಮರಳಿ ಖಾತೆಗೆ ಜಮಾ ಆಗಿತ್ತು. ಇದರಿಂದ ವಿಶ್ವಾಸಗೊಂಡ ವರ್ಷಾ, ಫೆಬ್ರುವರಿ 27ರಿಂದ ಮಾರ್ಚ್ 2ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 7,02,000ರೂ. ಹಣ ಜಮಾ ಮಾಡಿದ್ದಾರೆ.
ಆದರೆ, ನಂತರ ಯಾವುದೇ ಲಾಭಾಂಶವೂ ದೊರೆಯದೇ, ಹೂಡಿಕೆ ಮಾಡಿದ ಹಣವೂ ಮರಳಿ ಸಿಗದ ಹಿನ್ನೆಲೆಯಲ್ಲಿ ಅವರಿಗೆ ವಂಚನೆಗೆ ಒಳಗಾಗಿರುವ ಬಗ್ಗೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 319(2), 318(4) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 66(ಡಿ) ಅಡಿಯಲ್ಲಿ ಪ್ರಕರಣ (06/2026) ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
