Udupi| ಪ್ರಕೃತಿ ಸಹಜವಾಗಿ ಎಲ್ಲಾ ದನಗಳಿಗೆ ನಾಲ್ಕು ಕೆಚ್ಚಲು ಇದ್ದರೆ ಉಡುಪಿಯ ಪರ್ಕಳದ ಅಚ್ಯುತ ನಗರದಲ್ಲಿ ಐದು ಕೆಚ್ಚಲಿನ ದನ ಪತ್ತೆಯಾಗಿದೆ.
ಇಲ್ಲಿನ ಸ್ಥಳೀಯ ನಿವಾಸಿ, ಸದ್ಯ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿರುವ ಕೆ. ಆರ್. ಅಶೋಕ್ ಅವರ ಮನೆಗೆ ದಿನನಿತ್ಯ ಬೀಡಾಡಿ ದನಗಳು ಆಹಾರ ಅರಸಿ ಬರುವುದು ವಾಡಿಕೆ. ಅವುಗಳಿಗೆ ಆಹಾರ ನೀಡುವ ಕಾಯಕವನ್ನು ಕಳೆದ 14 ವರ್ಷದಿಂದ ನಿರಂತರ ಮಾಡುತ್ತಿದ್ದಾರೆ.

ಅಶೋಕ್ ದಂಪತಿ ದಿನಕ್ಕೆ 15 ರಿಂದ 20 ದನಗಳಿಗೆ ಆಹಾರ ನೀಡುತ್ತಿದ್ದಾರೆ. ಅವರ ಮನೆಗೆ ಬರುವ ದನಗಳ ಪೈಕಿ ಕಳೆದ ನಾಲ್ಕು ದಿನಗಳ ಹಿಂದೆ ಕರು ಹಾಕಿದ ದನವೊಂದರ ಕೆಚ್ಚಲು ಗಮನಿಸಿದಾಗ ಐದು ಕೆಚ್ಚಲು ಇರುವುದು ಕಂಡುಬಂದಿದ್ದು, ಇದು ಬಲು ಅಪರೂಪ ಎಂದೆನ್ನಲಾಗಿದೆ.

ಈ ಐದು ಕೆಚ್ಚಲಿನ ದನವನ್ನು ದಂಪತಿ ಚೆನ್ನಾಗಿಯೇ ಪೋಷಿಸುತ್ತಿದ್ದು, ಇವರ ಮನೆಯಲ್ಲಿ ಆಹಾರ ತಿಂದ ಬಳಿಕ ದನ ಮತ್ತು ಕರು ಜೊತೆಯಾಗಿ ಬೇರೆ ಕಡೆಗೆ ತೆರಳುತ್ತದೆ.
