Karwar| ಕೈಗಾಕ್ಕೆ ಬೃಹತ್ ಗಾತ್ರದ ಯಂತ್ರೋಪಕರಣ ಹೊತ್ತು ತಂದ ಲಾರಿಯೊಂದು ವಿದ್ಯುತ್ ಲೈನ್ ಅಡ್ಡಿಯಾಗಿ ಮುಂದೆ ಸಾಗದೇ ನಗರದ ಸುಭಾಷ ಸರ್ಕಲ್ ಬಳಿ ಮಧ್ಯ ರಸ್ತೆಯಲ್ಲಿಯೇ ನಿಂತ ಘಟನೆ ನಡೆದಿದೆ.

ಕೈಗಾ 5 ಮತ್ತು 6 ನೇ ಘಟಕದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ನಿರ್ಮಾಣ ಹಂತದ ಘಟಕ ಅಣುವಿದ್ಯುತ್ ಸ್ಥಾವರಕ್ಕೆ ಬೃಹತ್ ಯಂತ್ರೋಪಕರಣಗಳ ಸಾಗಾಟ ಮಾಡಲಾಗುತ್ತಿದೆ. ಬಾರಿ ಗಾತ್ರದ ಯಂತ್ರೋಪಕರಣದ ಬೃಹತ್ ಲಾರಿ ಆಗಮಿಸುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ನಗರದ ಸಿವಿಲ್ ಕೊರ್ಟ್ ರಸ್ತೆಯಲ್ಲಿನ ಬೃಹತ್ ಮರಗಳನ್ನು ತೆರವುಗೊಳಿಸಲಾಗಿತ್ತು. ಈ ರಸ್ತೆಯಲ್ಲಿ ಸಂಚರಿಸುವ ಕೈಗಾ ಅಣು ವಿದ್ಯುತ್ ಘಟಕಕ್ಕೆ ಸಂಬಂಧಿಸಿದ ಭಾರೀ ಲಾರಿಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು.

ಆದರೆ ಕೈಗಾಕ್ಕೆ ಸಾಗಲು ಬೃಹತ್ ಯಂತ್ರೋಪಕರಣ ಹೊತ್ತು ತಂದ ಈ ಲಾರಿ ಬುಧವಾರ ಬೆಳಗ್ಗೆ ನಗರದ ಸುಭಾಷ ಸರ್ಕಲ್ ಬಳಿ ವಿದ್ಯುತ್ ಲೈನ್ ಅಡ್ಡಿಯಾಗಿ ಮುಂದೇ ಸಾಗಲು ಮಧ್ಯ ರಸ್ತೆಯಲ್ಲೇ ನಿಂತಿದೆ. ಈ ಬಾರಿ ಲಾರಿ ಮಧ್ಯ ರಸ್ತೆಯಲ್ಲೇ ನಿಂತು ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಟ್ರಾಫಿಕ್ ಜಾಮ್ ಆಗಿದೆ. ನಂತರ ಸಂಚಾರಿ ಪೋಲಿಸರು ಈ ವಾಹನಗಳಿಗೆ ಬದಲಿ ಮಾರ್ಗದ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಬೃಹತ್ ಯಂತ್ರ ಹೊತ್ತ ಲಾರಿ ಕಳೆದ ಫೆಬ್ರವರಿಯಲ್ಲಿ ಗುಜರಾತ್ ನಿಂದ ಹೊರಟಿದ್ದು ಬರೋಬ್ಬರಿ ಎರಡುವರೆ ತಿಂಗಳ ಬಳಿಕ ಕಾರವಾರ ತಲುಪಿದೆ.
ಕಾರವಾರ-ಕೈಗಾ ರಸ್ತೆ ವಿಸ್ತರಣೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಈ ಘಟನೆಯಿಂದ ಮತ್ತೆ ಚಾಲ್ತಿಗೆ ಬಂದಿದೆ.
