Karwar|State Budget|MP Vishweshwar Hegde Kageri|Reactions| ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಇಂದಿನ ಬಜೆಟ್ ಕರ್ನಾಟಕದ ಪಾಲಿಗೆ ಭರವಸೆಗಿಂತ ಹೆಚ್ಚಾಗಿ ಆರ್ಥಿಕ ಸಂಕಷ್ಟವನ್ನೇ ತಂದೊಡ್ಡಿದೆ. ಅಭಿವೃದ್ಧಿಗಿಂತ ಕೇವಲ ಜನಪ್ರಿಯ ಯೋಜನೆಗಳ ಹೆಸರಿನಲ್ಲಿ ರಾಜ್ಯವನ್ನು ಸಾಲದ ಕೂಪಕ್ಕೆ ದೂಡಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದ್ದಾರೆ.
ಈ ಬಜೆಟ್ ಮೂಲಕ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿರುವ ಕಾಗೇರಿ, ಈ ಬಜೆಟ್ ರಾಜ್ಯದ ಭವಿಷ್ಯದ ಬಗ್ಗೆ ಯಾವುದೇ ದೂರದೃಷ್ಟಿ ಹೊಂದಿಲ್ಲದ ಮತ್ತು ಸಾಮಾನ್ಯ ಜನರ ಮೇಲೆ ಸಾಲದ ಹೊರೆ ಹೊರಿಸುವ ಒಂದು ನಿರಾಶಾದಾಯಕ ಆಯವ್ಯಯವಾಗಿದೆ.
ಸಮಗ್ರ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವುದೇ ಮಹತ್ವದ ಯೋಜನೆಗಳನ್ನು ಘೋಷಿಸದೆ, ಕೇವಲ ಸಾಂಕೇತಿಕವಾಗಿ ಆಸ್ಪತ್ರೆಯ ಸ್ಥಾಪನೆಯ ಭರವಸೆ ನೀಡಿರುವುದು ಜನತೆಗೆ ಹೆಚ್ಚಿನ ಪ್ರಯೋಜನ ನೀಡುವುದಿಲ್ಲ. ಘೋಷಿತ ಯೋಜನೆಗಳು ಕೇವಲ ಬಜೆಟ್ ಪುಸ್ತಕಕ್ಕೆ ಸೀಮಿತವಾಗದೆ ಶೀಘ್ರವಾಗಿ ಅನುಷ್ಠಾನಕ್ಕೆ ಬರಲಿ ಒತ್ತಾಯಿಸಿದ್ದಾರೆ.
