Karwar|JDS ಕಾರವಾರ: ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷಾಗಿ ಸೂರಜ್ ನಾಯ್ಕ ಸೋನಿ ನೇಮಕಾತಿಯು ವಾಮಮಾರ್ಗದ ಮೂಲಕ ಆಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ‌ .ವರಿಷ್ಠರು ಈ ರೀತಿ ಹೇರಿಕೆ ಮಾಡಬಾರದಿತ್ತು ಎಂದು ಜೆಡಿಎಸ್ ಮೂಲ ಪದಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾರವಾರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣೆ ಮೂಲಕ ಆಯ್ಕೆಯಾದ ಜಿಲ್ಲಾಧ್ಯಕ್ಷ ಜಿ.ಕೆ. ಪಟಗಾರ ಮಾತನಾಡಿ ಕಳೆದ ಸಾಕಷ್ಟು ವರ್ಷದಿಂದ ಜಿಲ್ಲಾ ಉಪಾಧ್ಯಕ್ಷ ನಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ‌ ಸಂಘಟನೆಗೆ ದುಡಿದಿದ್ದೇನೆ. ಜಿಲ್ಲಾಧ್ಯಕ್ಷರಾಗಿದ್ದ ಗಣಪಯ್ಯ ಗೌಡ ಅವರಿಗೆ ಅಪಘಾತವಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿ ಹೊತ್ತು, ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದೇನೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ಸದಸ್ಯತ್ವ ಮಾಡಿದ್ದೇನೆ. ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಪಕ್ಷದ ವರಿಷ್ಠರ ಆದೇಶದಂತೆ ಚುನಾವಣೆ ಮಾಡಿ ನನ್ನ ಜಿಲ್ಲಾಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು. ಉತ್ತರ ಕರ್ನಾಟಕದ ಸಮಾವೇಶದ ಸಂದರ್ಭದಲ್ಲಿ ವರಿಷ್ಠರು ಏಕಾಏಕಿ ಸೂರಜ್ ಸೋನಿ ಜಿಲ್ಲಾಧ್ಯಕ್ಷ ಎಂದು ಘೋಷಣೆ ಮಾಡಿದ್ದಾರೆ. ಇದು ಪ್ರಾಮಾಣಿಕವಾಗಿ ಕಳೆದ ಅನೇಕ‌ ವರ್ಷದಿಂದ ಜೆಡಿಎಸ್ ಪಕ್ಷದಲ್ಲಿ‌ ದುಡಿದವರಿಗೆ ಅನ್ಯಾಯವಾಗಿದೆ. ಇದು ಸರಿಪಡಿಸಬೇಕು. ಒಂದುವಾರ ಗಡುವು ನೀಡುತ್ತಿದ್ದೇನೆ. ಯಾವುದೇ ಕ್ರಮ ಆಗದೆ‌ ಇದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ‌ ಎಂದು ಎಚ್ಚರಿಕೆ ನೀಡಿದ್ದಾರೆ.

ಚುನಾವಣಾಧಿಕಾರಿ ರಾಘವೇಂದ್ರ ಮಡಿವಾಳ ಅವರ ಸಮ್ಮುಖದಲ್ಲಿ ಯಲ್ಲಾಪುರದಲ್ಲಿ ನಡೆದ ಸಾಂಸ್ಥಿಕ ಚುನಾವಣೆಯಲ್ಲಿ 65 ಸದಸ್ಯರ ಬೆಂಬಲದೊಂದಿಗೆ ಜಿ.ಕೆ. ಪಟಗಾರ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದರು. ಅವರಿಗೆ ಗುರುತಿನ ಚೀಟಿಯನ್ನು ಸಹ ನೀಡಲಾಗಿತ್ತು. ಮಾಜಿ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡರ ಅವಧಿಯಲ್ಲಿಯೂ ಸಕ್ರಿಯರಾಗಿದ್ದ ಪಟಗಾರ ಅವರು, ಜಿಲ್ಲಾಧ್ಯಕ್ಷರ ಅನುಪಸ್ಥಿತಿಯಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಹೀಗಿದ್ದರೂ, ಹೈಕಮಾಂಡ್ ಚುನಾವಣಾ ಪ್ರಕ್ರಿಯೆಯನ್ನು ಬದಿಗೊತ್ತಿ ಹೊಸಬರನ್ನು ನೇಮಿಸಿರುವುದು ಅಚ್ಚರಿ ಮೂಡಿಸಿದೆ ಎಂದರು.

ಹಿರಿಯ ಧುರೀಣ ರಮೇಶ ನಾಯ್ಕ ಮಾತನಾಡಿ ವರಿಷ್ಠರು ಪಕ್ಷಕ್ಕಾಗಿ ದುಡಿಯುವವರನ್ನು ಬಿಟ್ಟು ‘ಬಕೆಟ್’ ಹಿಡಿಯುವವರಿಗೆ ಮಣೆ ಹಾಕುತ್ತಿದ್ದಾರೆ ಎಂದು ಟೀಕಿಸಿದ ಅವರು, ಸೂರಜ್ ಸೋನಿ ಅವರು ಈವರೆಗೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ ಮತ್ತು ಯಾವುದೇ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಇಂತಹ ವ್ಯಕ್ತಿಯನ್ನು ಏಕಾಏಕಿ ಅಧ್ಯಕ್ಷರನ್ನಾಗಿ ಮಾಡಿರುವುದು ಕೇವಲ ಪಟಗಾರ ಅವರಿಗೆ ಮಾಡಿದ ಅನ್ಯಾಯವಲ್ಲ, ಬದಲಾಗಿ ಇಡೀ ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಅವರು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಶೇಖರ್ ಪೂಜಾರಿ, ಗೋವಿಂದೇ ಗೌಡ, ಈಶ್ವರ ನಾಯ್ಕ, ರಮೇಶ್ ನಾಯ್ಕ ಸೇರಿದಂತೆ ಎಲ್ಲಾ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.