Karwar| ಭಾರೀ ಮಳೆಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ತುರ್ತಾಗಿ ರಜೆ ಘೋಷಿಸಬೇಕಾದ ಸಂದರ್ಭದಲ್ಲಿ ಕಾರವಾರ ತಹಶೀಲ್ದಾರ್ ನಿಶ್ಚಲ್ ನೋರೊನ್ಹಾ ಅವರು ಕಂಪ್ಯೂಟರ್‌ ಬದಲಿಗೆ ಸ್ವತಃ ಕೈಬರಹದಲ್ಲೇ ಆದೇಶ ಬರೆದು ಹೊರಡಿಸಿದ್ದು, ಅವರ ಕನ್ನಡದ ಸುಂದರ ಕೈಬರಹ ಹಾಗೂ ಕರ್ತವ್ಯನಿಷ್ಠೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಗುರುವಾರ ಬೆಳಗ್ಗೆಯೇ ಕಾರವಾರದಲ್ಲಿ ಭಾರೀ ಮಳೆ ಸುರಿಯಲು ಆರಂಭಿಸಿದೆ. ಭಾರತೀಯ ಹವಾಮಾನ ಇಲಾಖೆ ಸಹ ರೆಡ್ ಅಲರ್ಟ್ ಘೋಷಿಸಿತ್ತು. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ರಜೆ ಘೋಷಿಸುವ ಅಗತ್ಯ ಎದುರಾದ ಹಿನ್ನೆಲೆಯಲ್ಲಿ ಕಚೇರಿಗೆ ತೆರಳಿ ಕಂಪ್ಯೂಟರ್‌ನಲ್ಲಿ ಪತ್ರ ಸಿದ್ಧಪಡಿಸಲು ಸಮಯ ಇರಲಿಲ್ಲ. ಅಷ್ಟರಲ್ಲಾಗಲೇ ಮಕ್ಕಳು ಶಾಲೆಗೆ ತೆರಳುವ ಸಾಧ್ಯತೆಯೂ ಇತ್ತು.

ಇದರಿಂದ ತಹಶೀಲ್ದಾರ್ ನಿಶ್ಚಲ್ ನೋರೊನ್ಹಾ ಅವರು ತಮ್ಮ ಮನೆಯಿಂದಲೇ ಸ್ಪಷ್ಟ ಹಾಗೂ ಅಚ್ಚುಕಟ್ಟಾದ ಕನ್ನಡ ಕೈಬರಹದಲ್ಲಿ ಪತ್ರ ಬರೆದು, ಕಾರವಾರ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿದರು. ಬಳಿಕ ಸಂಬಂಧಿತ ಅಧಿಕಾರಿಗಳಿಗೆ ಆದೇಶವನ್ನು ತಕ್ಷಣವೇ ರವಾನಿಸಲಾಯಿತು.

ಈ ಕೈಬರಹದ ಆದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುಂದರ ಕನ್ನಡ ಬರವಣಿಗೆ ಹಾಗೂ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವ್ಯವಸ್ಥೆ, ಕಂಪ್ಯೂಟರ್ ಬಳಕೆ ಮತ್ತು ಕಾಗದರಹಿತ ಕಚೇರಿ (Paperless Office) ಪರಿಕಲ್ಪನೆ ಹೆಚ್ಚಾಗುತ್ತಿರುವ ಕಾರಣ ಕೈಬರಹದಲ್ಲಿ ಅಧಿಕೃತ ಪತ್ರ ಬರೆಯುವ ಸಂದರ್ಭಗಳು ಅಪರೂಪವಾಗಿವೆ. ಸರ್ಕಾರಿ ಕಚೇರಿಗಳಲ್ಲಿಯೂ ಬಹುತೇಕ ಎಲ್ಲ ಆದೇಶಗಳು ಕಂಪ್ಯೂಟರ್‌ನಲ್ಲೇ ಸಿದ್ಧವಾಗುತ್ತವೆ. ಇಂತಹ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸುಂದರ ಕನ್ನಡದಲ್ಲಿ ಕೈಬರಹದ ಮೂಲಕ ಆದೇಶ ಹೊರಡಿಸಿರುವ ತಹಶೀಲ್ದಾರ್ ನಿಶ್ಚಲ್ ನೋರೊನ್ಹಾ ಅವರ ಕಾರ್ಯವೈಖರಿ ಕನ್ನಡಾಭಿಮಾನಿಗಳ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಕರ್ತವ್ಯನಿಷ್ಠೆ ಮತ್ತು ಕನ್ನಡ ಪ್ರೇಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.