Haliyal| ತಾಲೂಕಿನ ಮುರ್ಕವಾಡ ಗ್ರಾಮದ ಹೋಟೆಲ್‌ನಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುರ್ಕವಾಡ ಗ್ರಾಮದ ಎಸ್.ಎಂ. ಹೋಟೆಲ್ ನಡೆಸುತ್ತಿರುವ ಕುಮಾರ ಸೋಮನಿಂಗ ಮಾಳವಿ (26) ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ  ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32 ಹಾಗೂ 34ರ ಅನ್ವಯ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಯು ಯಾವುದೇ ಪರವಾನಗಿ, ಪರ್ಮಿಟ್ ಇಲ್ಲದೆ ಹಳಿಯಾಳದ ವಿವಿಧ ಮದ್ಯದ ಅಂಗಡಿಗಳಿಂದ ಮದ್ಯ ಖರೀದಿಸಿ, ಅದನ್ನು ತನ್ನ ಹೋಟೆಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಈ ಕುರಿತು ಹಳಿಯಾಳ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಮಾರಾಟಕ್ಕೆ ಇಡಲಾಗಿದ್ದ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಳಿಯಾಳದಲ್ಲಿ ಕಾಯಿದೆ ಉಲ್ಲಂಘಿಸಿ ದಾಬಾ, ಹೊಟೆಲ್ ಸೇರಿದಂತೆ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ಸಾಗಿದೆ. ಇವರುಗಳಿಗೆ ಅಬಕಾರಿ ಕಾಯಿದೆ ಉಲ್ಲಂಘಿಸಿ‌ ಮದ್ಯ ಮಾರಾಟ ಮಾಡುವ ಬಾರ್ ಗಳ ಮೇಲೂ ಕಠಿಣ ಕ್ರಮವಾಗಬೇಕೆಂಬುದು ಸಾರ್ವಜನಿಕರ ಒತ್ತಾಯ.