Karwar| ಕೈಗಾ 5 ಮತ್ತು 6ನೇ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಘಾ ಇಂಜಿನಿಯರಿಂಗ್ ಕಂಪನಿಯ ಡೆಪ್ಯೂಟಿ ಮ್ಯಾನೇಜರ್‌ಗೆ ಗುತ್ತಿಗೆ ಕೆಲಸಕ್ಕೆ ಸಂಬಂಧಿಸಿದಂತೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊರ್ವನ ಮೇಲೆ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಲಾಪುರದ ಹಿಂದೂವಾಡಾದ ನಿವಾಸಿ ಅಂಬರೀಶ್ ಬಾಂದೇಕರ್‌ ಎಂಬಾತನೇ ಕಂಪನಿಯ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ. ಈತನ ಮೇಲೆ ದೂರು ದಾಖಲಾಗಿದೆ.

ಕಂಪನಿಯ ಅಧಿಕಾರಿ ನೀಡಿದ ದೂರಿನ ಪ್ರಕಾರ, ಜೂನ್ 27ರಂದು ಬೆಳಿಗ್ಗೆ ಸುಮಾರು 11.30ಕ್ಕೆ ಆರೋಪಿಯು ಮೇಘಾ ಇಂಜಿನೀಯರಿಂಗ್‌ ಕಂಪನಿಯ ಕಚೇರಿಗೆ ಹೋಗಿ, ‘ನೀವು ಹೋರ ರಾಜ್ಯದಿಂದ ಬಂದವರು… ಇಲ್ಲಿ ತಾನು ಹೇಳಿದ ಹಾಗೆ ನಡೆದುಕೊಳ್ಳಬೇಕು, ತಾನು ಹೇಳಿದ ವ್ಯಕ್ತಿಗೆ ಮಾತ್ರ ಕೆಲಸ ನೀಡಬೇಕು, ಮತ್ತೆ ಬೇರೆ ಯಾರನ್ನೂ ಸಹ ಕೆಲಸಕ್ಕೆ ತೆಗೆದುಕೊಳ್ಳಬಾರದು ಹಾಗೂ ತಾನು ಹೇಳಿದ ವ್ಯಕ್ತಿಗೆ ಒಳ್ಳೆಯ ಗಾಡಿಗಳನ್ನು ನೀಡಬೇಕು, ಹೊರ ರಾಜ್ಯದಿಂದ ಬಂದ ಡ್ರೈವರ್ ಗಳಿಗೆ ಹಳೆಯ ವಾಹನಗಳನ್ನು ನೀಡಬೇಕು.. ತಾನು ಹೇಳಿದ ಹಾಗೆ ಕೆಲಸದ ಸಮಯವನ್ನು ನಿಗದಿಪಡಿಸಬೇಕು. ಒಂದೊಮ್ಮೆ ತನ್ನ ಮಾತನ್ನು ಕೇಳದೇ ಇದ್ದಲ್ಲಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಮೇಘಾ ಇಂಜಿನೀಯರಿಂಗ್ ಕಂಪನಿಯ ಮೆಕ್ಯಾನಿಕಲ್‌ ಡೆಪ್ಯೂಟಿ ಮೇನೇಜರ್‌ ಆಗಿರುವ ವೆಂಕಟನಾಯಡು ಚಿನ್ನ ವೆಂಕಟಯ್ಯಾ ಪೊತೂರ ಎಂಬುವವರು ಮಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.