ಹಾವೇರಿ: ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಬಲೀಕರಣ, ನಾಯಕತ್ವ ಬೆಳವಣಿಗೆ, ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳು ಮತ್ತು ನಿವಾರಣೆಯ ನಿಟ್ಟಿನಲ್ಲಿ ಹೊಸ ದೃಷ್ಟಿಕೋನ ಇಟ್ಟುಕೊಂಡು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ರಚಿಸಲಾಗಿದೆ ಎಂದು ಸಂಘದ ಅಧ್ಯಕ್ಷೆ ರೋಶಿನಿ ಗೌಡ ಹೇಳಿದರು.

ಹಾವೇರಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮಹಿಳಾ ಸರ್ಕಾರಿ ನೌಕರರಿಗೆ ಪ್ರಾಧಾನ್ಯತೆ ದೊರೆಯದ ಕಾರಣ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ತಿತ್ವಕ್ಕೆ ಬಂದಿದೆ. ರಾಜ್ಯಾದ್ಯಂತ‌‌ 50 ಸಾವಿರ ಸರಕಾರಿ ಮಹಿಳಾ ನೌಕರರು ಈಗಾಗಲೇ ನಮ್ಮ ಸಂಘದ ಸದಸ್ಯತ್ವ ಪಡೆದಿದ್ದಾರೆ. ರಾಜ್ಯದ 20 ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಘಟಕಗಳು ಅಸ್ತಿತ್ವಕ್ಕೆ ಬಂದಿದ್ದು, ಹಾವೇರಿ ಜಿಲ್ಲೆಯಲ್ಲಿ ಶೀಘ್ರದಲ್ಲೇ ಸಂಘ ಕಾರ್ಯಚಟುವಟಿಕೆ ಆರಂಭಿಸಲಿದೆ ಎಂದರು.

ರಾಜ್ಯದಲ್ಲಿ ಶೇ.52 ರಷ್ಟು ಮಹಿಳಾ ನೌಕರಿದ್ದರೂ, ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಮಹಿಳೆಯರಿಗೆ ಸರಿಯಾಗಿ ಪ್ರಾತಿನಿಧ್ಯ ದೊರೆಯದ ಕಾರಣ ನಾವು ಪ್ರತ್ಯೇಕವಾಗಿ ಮಹಿಳಾ ಸಂಘ ಅಸ್ತಿತ್ವಕ್ಕೆ ತಂದಿದ್ದೇವೆ.‌ 2023 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ನಮ್ಮ ಸಂಘದ ವತಿಯಿಂದ ವೇತನ ಸಹಿತ ಋತುಚಕ್ರ ರಜೆ ನೀಡಲು ಹೋರಾಟ ಮಾಡಿ ಯಶಸ್ವಿಯಾಗಿದೆ ಎಂದರು.

ಮಹಿಳಾ ನೌಕರರ ಸಬಲೀಕರಣ, ನಾಯಕತ್ವ ಬೆಳವಣಿಗೆ, ಕಾರ್ಯಕ್ಷೇತ್ರದಲ್ಲಿ ಆಗುವ ಸಮಸ್ಯೆಗಳ ನಿವಾರಣೆ ಸೇರಿದಂತೆ ಮಹಿಳೆಯರ ಸರ್ವಾಂಗೀಣ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಸಂಘಟನೆ ಶ್ರಮಿಸುತ್ತಿದೆ. ರಾಜ್ಯ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಬೇಕು. ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿ ಮಾಡಬೇಕು. ಮಾತೃತ್ವ ರಜೆ ಒಂದು ವರ್ಷದವರೆಗೆ ವಿಸ್ತರಿಸಬೇಕು. ಗರ್ಭಿಣಿ ನೌಕರರಿಗೆ ವೈದ್ಯಕೀಯ ಪರೀಕ್ಷೆಗಾಗಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ಮತ್ತು ಸೆಪ್ಟಂಬರ್ 13ರನ್ನು ಸರ್ಕಾರಿ ಮಹಿಳಾ ನೌಕರರ ದಿನ ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಖಜಾಂಚಿ ವೀಣಾ ಕೃಷ್ಣಮೂರ್ತಿ, ಕಾರ್ಯದರ್ಶಿ ಎಂ.ಆಷಾರಾಣಿ, ಜಿಲ್ಲಾ ಘಟಕದ ಅಧ್ಯಕ್ಷೆ ಶೈಲಜಾ ಹೊರಟ್ಟಿ, ಪ್ರಧಾನ ಕಾರ್ಯದರ್ಶಿ ಶಿವಲೀಲಾ ಗುಡ್ಡದ ಸೇರಿದಂತೆ ಇತರರು ಇದ್ದರು.