ಉತ್ತರಕನ್ನಡ ಜಿಲ್ಲೆಯ ಕಾರವಾರದ ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ವಿಬಿ-ಜಿ- ರಾಮ್ ಜಿ ಜಾಗೃತಿ ಸಮಾವೇಶ ಕಾರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ್, “ವಿಕಸಿತ ಭಾರತದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು 100ದಿನಗಳ ಉದ್ಯೋಗ ಖಾತ್ರಿಯನ್ನು 125 ದಿನಗಳಿಗೆ ಏರಿಸಿದ್ದಾರೆ. ಅಲ್ಲದೇ, ಗೌರವ ಧನವನ್ನು ಕೂಡಾ ಒಂದು ವಾರದಲ್ಲಿ ಆನ್‌ಲೈನ್ ಮೂಲಕ ನಡೆಸುವ ವ್ಯವಸ್ಥೆ ಕೂಡಾ ಮಾಡಿದ್ದಾರೆ” ಎಂದರು.

“ಈ ರಾಮ್ ಜಿ ಹೊಸ ಯೋಜನೆಯಲ್ಲ. ಆದರೆ, ಹೊಸ ರೂಪ ಬಂದಿದೆ. ಅದನ್ನು ಅನುಷ್ಠಾನ ಮಾಡದೆ ರಾಜ್ಯ ಸರಕಾರವು ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸಿಗರು ಯೋಜನೆಯಲ್ಲಿ ರಾಮನ ಹೆಸರು ಇರೋದ್ರಿಂದ ವಿರೋಧ ಮಾಡುತ್ತಿದ್ದಾರೆ. ಅಧಿವೇಶನದ ವೇಳೆ ರಾಜ್ಯಪಾಲರ ಜತೆಯೂ ಅಸಂಬದ್ಧವಾಗಿ ವರ್ತಿಸಿದ್ದಾರೆ. ಕಾಂಗ್ರೆಸಿನವರಿಗೆ ಹುಚ್ಚು ಹಿಡಿದಿದ್ದು, ಆಸ್ಪತ್ರೆಗೆ ದಾಖಲಾಗಿದ್ರೆ ಒಳ್ಳೇದಿತ್ತು” ಎಂದು ಆರೋಪಿಸಿದರು.

“ರಸ್ತೆಗಳು ಹಾಳಾಗಿದ್ದು, ಜಲ್ಲಿಗಳನ್ನು ಹಾಕಲೂ ಯೋಗ್ಯತೆಯಿಲ್ಲ. ಜಲಜೀವನ ಮಿಷನ್‌ನಡಿ ಜನರಿಗೆ ನೀರು ಪೂರೈಕೆ ಮಾಡದ್ದರಿಂದ ಇನ್ನೂ ಕೂಡಾ ಯೋಜನೆ ಬಾಕಿಯಿದೆ. ಯಡಿಯೂರಪ್ಪ ಸರಕಾರವಿದ್ದಾಗ ಮಾಡಿದ ಯೋಜನೆಗಳನ್ನು ಕೂಡಾ ನಿಲ್ಲಿಸಿ ಬಹಳಷ್ಟು ಕೆಟ್ಟ ರೀತಿಯಲ್ಲಿ ಕಾಂಗ್ರೆಸ್ ಮೆರೆಯುತ್ತಿದೆ. ಜನರಿಗೆ ಉಪಯೋಗವಾಗುವ  ಯೋಜನೆಯನ್ನು ಜಾರಿ ಮಾಡುವ ಬದಲು ಗಾಂಧಿ ಕುಟುಂಬವನ್ನು ಮೆಚ್ಚಿಸಲು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ನಿಂತಿದೆ” ಎಂದರು

ಉತ್ತರಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೋರಾಟ ನಡೆದರೂ, ಅಗತ್ಯವಿಲ್ಲದ ಕೇಣಿ ಬಂದರು ಯೋಜನೆ ನೀಡಿದ್ದಾರೆ. ಇಲ್ಲಿನ ಜಿಲ್ಲಾಸ್ಪತ್ರೆಗೆ ಎಂಆರ್‌ಐ ಯಂತ್ರ ಕೂಡ ನೀಡಿಲ್ಲ. ಆದರೆ, ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯದ ಗ್ರಾಮೀಣ ಭಾಗದಲ್ಲಿ ಅನುಷ್ಠಾನಗೊಳ್ಳಲು ಬಿಜೆಪಿ ಕಾರ್ಯಕ್ರಮಗಳ‌ ಮೂಲಕ ಜನರಿಗೆ ಮಾಹಿತಿ ನೀಡುತ್ತಿದೆ ಎಂದು ರೂಪಾಲಿ ನಾಯ್ಕ್ ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಮಾತನಾಡಿ, ಕೇಂದ್ರ ಸರಕಾರದ ಜತೆ ರಾಜ್ಯ ಸರಕಾರ ಸಮನ್ವಯ ಸಾಧಿಸದೆ ಜನರಿಗೆ ಮೋಸ ಮಾಡುತ್ತಿದೆ. ಕಾಂಗ್ರೆಸಿನ ಅಧಿಕಾರದ ಹಪಹಪಿಯಿಂದ ಬಡವರು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಕೇಂದ್ರ ಜನಪರ ಯೋಜನೆಗಳ ಜಾರಿಗೆ ಕಾಂಗ್ರೆಸ್ ಸರಕಾರವೂ ಕೈಜೋಡಿಸಬೇಕು ಎಂದರು.

ಬಿಜೆಪಿಯ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ, ಗಜಾನನ ಗುನಗ, ಸಂಜಯ ಸಾಳುಂಕೆ, ಸುನೀಲ್ ಸೋನಿ, ನಾಗೇಶ ಕುರ್ಡೇಕರ, ಸೂರಜ್ ದೇಸಾಯಿ, ಉದಯ ನಾಯ್ಕ, ಮನುನಾಥ ಮುದಗೇಕರ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.