ಗೋಕರ್ಣ: ಮಹಾಶಿವರಾತ್ರಿ ಪ್ರಯುಕ್ತ ಉಮಾಮಹೇಶ್ವರ ಗೆಳೆಯರ ಬಳಗ ಗೋಕರ್ಣ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಪಂದ್ಯಾವಳಿಯು ಯಶಸ್ವಿಯಾಗಿ ನಡೆಯಿತು.

ಪಂದ್ಯಾವಳಿಯ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನೀಲಗೋಡ ಯಕ್ಷಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾದೇವ ಸ್ವಾಮಿ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನುಗಾರರ ಸಹಕಾರಿ ಸಂಘ ಲಿ. ತದಡಿ ಅಧ್ಯಕ್ಷರಾದ ಮಹೇಶ ಮೂಡಂಗಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ, ಗ್ರಾಮ ಪಂಚಾಯತ್ ಸದಸ್ಯರಾದ ಸುಜಯ ಶೆಟ್ಟಿ ಗೋಕರ್ಣ, ಉಮೇಶ ಅಂಬಿಗ, ಗೋಕರ್ಣ ಪಿ.ಎಸ್.ಐ ಅನಿಲ್, ದಾಮೋದರ ಮೂಡಂಗಿ, ನಾಗರಾಜ ಅಂಬಿಗ, ಮಹೇಶ ಅಂಬಿಗ, ಮಲ್ಲಿಕಾರ್ಜುನ ಹೊನ್ನಾವರಕರ್, ಜಿ ಏನ್ ಗೌಡ, ಜಗದೀಶ ನಾಯ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮೀನುಗಾರ ಸಮಾಜದ ಹಿರಿಯರಾದ ಗೌರಿ ಅಂಬಿಗರನ್ನು ಹಾಗೂ ಚಿಕ್ಕವಯಸ್ಸಿನಲ್ಲೇ ಶೈಕ್ಷಣಿಕ ಸಾಧನೆಗೈದು ವಕೀಲ ವೃತ್ತಿ ಪೂರೈಸಿದ
ಸುಚಿತ್ರ ಮಾದೇವ ಅಂಬಿಗರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನರಾದ ನಾಗೇಶ ಅಂಬಿಗರಿಗೆ ಶೃದ್ಧಾಂಜಲಿ ಕೋರಲಾಯಿತು.

ಉಮಾಮಹೇಶ್ವರ ಗೆಳೆಯರ ಬಳಗ ಗೋಕರ್ಣ ಪ್ರಥಮ ವರ್ಷದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.ಪಂದ್ಯಾವಳಿಯಲ್ಲಿ ಒಟ್ಟೂ 16 ತಂಡಗಳು ಭಾಗವಹಿಸಿದ್ದವು.

ಫೈನಲ್ ನಲ್ಲಿ ವಿನ್ನರ್ ತಂಡವಾಗಿ ಕರಿಕಾನ ಪರಮೇಶ್ವರಿ ಕೆರೆಕೋನ್ ಹೊನ್ನಾವರ ಹಾಗೂ ರನ್ನರ್ ಅಪ್ ತಂಡವಾಗಿ ಅಂಬಿಗರ ಸಮಾಜದ ಪದ್ಮವತಿ ಅಮ್ಮಾ ಮಿರ್ಜಾನ್ ಹಾಗೂ ಕಡಲು ಮಕ್ಕಳು ಮುರ್ಡೇಶ್ವರ ತೃತೀಯ ಬಹುಮಾನ ಪಡೆದರೆ, ಸ್ಟಾರ್ ಬಾಯ್ಸ್ ಗೋಕರ್ಣ ತಂಡವು ನಾಲ್ಕನೇ ಬಹುಮಾನ ಪಡೆಯಿತು.