ಕರ್ನಾಟಕದ ಬಾರ್ಡೋಲಿ ಎಂದೇ ಪ್ರಖ್ಯಾತವಾಗಿರುವ ಅಂಕೋಲಾ ತಾಲ್ಲೂಕು ಈಗ ಜೂಜಾಟಗಾರರ ಹಾಗೂ ದೋ ನಂಬರ್ ದಂಧೆಕೋರರ ಪಟ್ಟಣ ಎಂಬ ಕುಖ್ಯಾತಿಯತ್ತ ಹೆಜ್ಜೆ ಹಾಕುತ್ತಿದೆಯಾ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡುತ್ತಿದೆ…!

ಹೌದು ಭಾರತದ ಸ್ವಾತಂತ್ಯ ಸಂಗ್ರಾಮದ ಸಮಯದಲ್ಲಿ ಗುಜರಾತ್ ನ ಬಾರ್ಡೋಲಿ ಸತ್ಯಾಗ್ರಹವು ಮಹತ್ವದ ಪಾತ್ರವಹಿಸಿತ್ತು. ಉಕ್ಕಿನ ಮನುಷ್ಯ ಎಂಬ ಖ್ಯಾತಿ ಹೊಂದಿದ್ದ ಸರ್ಧಾರ್ ವಲ್ಲಭಭಾಯಿ ಪಟೇಲ್ ನೇತ್ರತ್ವದಲ್ಲಿ ನಡೆದ ಸತ್ಯಾಗ್ರಹ ದೇಶದಾದ್ಯಂತ ಸಂಚಲನ ಮೂಡಿಸಿತ್ತು.

ಬ್ರಿಟಿಷರು ಹೇರಿದ್ದ ತೆರಿಗೆ ವಿರುದ್ಧದ ಹೋರಾಟದ ಪ್ರಭಾವ ಎಷ್ಟಿತ್ತೆಂದರೆ ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ಸ್ವಾತಂತ್ಯ ಹೋರಾಟಗಾರರು ಸಂಘಟಿತರಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಸಜ್ಜಾದರು. ಈ ಚಳುವಳಿಯ ಪ್ರಭಾವ ಉತ್ತರಕ್ಕನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಹೆಚ್ಚಾಗಿದ್ದ ಪರಿಣಾಮ ಹಳ್ಳಿ ಹಳ್ಳಿಗಳಲ್ಲೂ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಇಂದು ಅಂಕೋಲಾ ತಾಲ್ಲೂಕು ಕರ್ನಾಟಕದ ಬಾರ್ಡೋಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂಥಹ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದ ಈ ನಾಡಲ್ಲಿ ಈಗ ಗಲ್ಲಿ ಗಲ್ಲಿಗಳಲ್ಲೂ ಜುಗಾರಿ ವೀರರು, ಮಟ್ಕಾ ಶೂರರು, ಅಕ್ರಮ ಗಣಿಗಾರಿಕೆದಾರರು ಹುಟ್ಟಿಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಹೇಳಿ ಕೇಳಿ ಅಂಕೋಲಾ ತಾಲೂಕು ಕಲೆ ಮತ್ತು ಸಂಸ್ಕ್ರತಿಗೆ ದೇಶಾದ್ಯಂತ ಹೇಸರು ಮಾಡಿರುವ ತಾಲೂಕಾಗಿದೆ. ಇಲ್ಲಿ ವಾರಕ್ಕೆ ಒಂದು ಜಾತ್ರೆ, ಬಂಡಿಹಬ್ಬಗಳು ನಡೆಯುತ್ತವೆ. ದಿನಕ್ಕೆ ಐದಾರು ನಾಟಕ, ಯಕ್ಷಗಾನಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡಿಯುತ್ತಲೇ ಇರುತ್ತವೆ.

ಜೂಗಾರಿ ವೀರರಿಗೆ ಇಂಥಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೇರುವ ಜನರೇ ಬಂಡವಾಳ. ರಾತ್ರಿ ನಡೆಯುವ ನಾಟಕ ಗಳ ಪಕ್ಕದಲ್ಲೇ ತಮ್ಮ ಅಡ್ಡ ಮಾಡಿಕೊಂಡು ರಾಜಾ, ರಾಣಿ, ಎಕ್ಕ, ಕಳವರ್ ಅಂತಾ ಕೂಗುತ್ತಾ ಅಕ್ಕ ಪಕ್ಕದ ಜನರನ್ನು ಆಕರ್ಷಿಸುತ್ತಾರೆ.

ಈ ಜೂಗಾರಿ ಕೋರರ ಹಣದ ವ್ಯಾಮೋಹದ ಬಲೆಗೆ ಬಿದ್ದ ಅಮಾಯಕರು ಎಲೆ ಮತ್ತು ನಂಬರ್ ಮೇಲೆ ಹಣ ಕಟ್ಟಿ  ಸಾವಿರಾರು ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ದಂಧೆ ಇತ್ತೀಚಿಗೆ ಜೋರಾಗಿದೆ. ಈ ಬಗ್ಗೆ ಪ್ರಜ್ಞಾವಂತ ನಾಗರಿಕರು ಸ್ಥಳೀಯ ಪೋಲಿಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗದ ಹಿನ್ನಲೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಈ ಅಕ್ರಮ ಆಟದ ವಿಡಿಯೋ ಚಿತ್ರಿಕರಿಸಿ ದೂರು ನೀಡಿದ್ದಾರೆ.

ಪೋಲಿಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಅಂಕೋಲಾ ಪೋಲಿಸರು ವಿಡಿಯೋ ದಲ್ಲಿ ಕಾಣುವ ಕೆಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಅದಲ್ಲದೇ ಇತ್ತೀಚಿಗೆ ಅಂಕೋಲಾದಲ್ಲಿ ಮಟ್ಕಾ ಆಟ ಮೀತಿಮೀರಿದೆ ಎಂದು ಸಾರ್ವಜನಿಕರ ಆರೋಪವಾಗಿದೆ. ಮೂರ್ನಾಲ್ಕು ಪ್ರಮುಖ ಬುಕ್ಕಿಗಳು ಸಂಪೂರ್ಣ ಅಂಕೋಲಾ ಮಟ್ಕಾವನ್ನು ನಿಯಂತ್ರಿಸುತ್ತಿದ್ದಾರೆ. ಮಂಜುನಾಥ ಸ್ವಾಮಿ ಅಂಕೋಲಾದ ಪ್ರಭಾವಿ ‘ಮಠ’ ಕ್ಕೆ ಕಪ್ಪಕಾಣಿಕೆ ನೀಡಿ ರಾಜಾರೋಷವಾಗಿ ಮಟ್ಕಾ ನಡೆಸಿತ್ತಿದ್ದು ನಿಯಂತ್ರಿಸಬೇಕಾದವರೇ ಪುಡಿಗಾಸಿನ ಆಸೆಗಾಗಿ ತೆಪ್ಪಿಗಿದ್ದಾರೆ ಎನ್ನುವ ಆರೋಪವಿದೆ.

ಜೂಗಾರಿ ಹಾಗೂ ಮಟ್ಕಾದ ಕಬಂದಭಾವಿನ ಜೊತೆಗೆ ಅಕ್ರಮ ಮರಳುಮಾಪಿಯಾ ಕೂಡ ಸೇರಿಕೊಂಡಿದ್ದು ಈ ಎಲ್ಲಾ ಅಕ್ರಮ ಚಟುವಟಿಕೆಗಳ ವಹಿವಾಟು ತಿಂಗಳಿಗೆ 10 ಕೋಟಿಗೂ ಮೀರಬಹುದು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ತಕ್ಷಣ ಪೋಲಿಸ್ ಇಲಾಖೆ ಈ ಎಲ್ಲಾ ಅಕ್ರಮ ಚಟುವಟಿಕೆಯನ್ನು ನಿಯಂತ್ರಿಸಬೇಕಾದ ಅನಿವಾರ್ಯತೆ  ಇದೆ ಎನ್ನುವುದು ಇಲ್ಲಿ ಪ್ರಜ್ಞಾವಂತರ ಆಗ್ರಹವಾಗಿದೆ.

ದೀಪನ್ ಎಮ್.ಎನ್ ಅವರು ಉತ್ತರಕನ್ನಡ ಜಿಲ್ಲೆಗೆ ಎಸ್. ಪಿ ಆಗಿ ಅಧಿಕಾರ ವಹಿಸಿದ ದಿನದಿಂದ ಇಲ್ಲಿಯ ವರೆಗೆ ಬಹುತೇಕ ತಾಲೂಕಿ ಓ.ಸಿ ಮಟ್ಕಾ ಬುಕ್ಕಿಗಳ ಮೇಲೆ ದಾಳಿ ನಡೆಸಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ. ಹಾಗೇ ಅಂಕೋಲಾ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಜೂಜಾಟ, ಮಟ್ಕಾ ಹಾಗೂ ಅಕ್ರಮ ಮರಳು ಮಾಫಿಯಾವನ್ನು ಸಂಪೂರ್ಣವಾಗಿ ನಿಷೇಧಿಸಲಿ ಎನ್ಮುವುದು ಸ್ಥಳೀಯ ಪ್ರಜ್ಞಾವಂತರ ಆಗ್ರಹವಾಗಿದೆ.