ಕಾರವಾರ: ಕಾರವಾರ ಉಪವಿಭಾಗದ ನೂತನ ಉಪವಿಭಾಗಾಧಿಕಾರಿ (ಎಸಿ)ಯಾಗಿ ಶಾಲಂ ಹುಸೇನ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಶಾಲಂ ಹುಸೇನ್ ಅವರು ಈ ಹಿಂದೆ ಧಾರವಾಡ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಸುಮಾರು ಒಂದು ವರ್ಷದಿಂದ ಕಾರವಾರ ಉಪವಿಭಾಗಾಧಿಕಾರಿ ಹುದ್ದೆ ಖಾಲಿ ಇದ್ದ ಕಾರಣ, ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ ಅವರು ಹೆಚ್ಚುವರಿ ಹೊಣೆಗಾರಿಕೆ ನಿರ್ವಹಿಸುತ್ತಿದ್ದರು.
ರಾಜ್ಯ ಸರ್ಕಾರದ ಇತ್ತೀಚಿನ ಆದೇಶದಂತೆ ಶಾಲಂ ಹುಸೇನ್ ಅವರನ್ನು ಕಾರವಾರ ಉಪವಿಭಾಗಾಧಿಕಾರಿಯಾಗಿ ನಿಯೋಜಿಸಲಾಗಿದ್ದು, ಅವರ ನೇಮಕದೊಂದಿಗೆ ಉಪವಿಭಾಗಕ್ಕೆ ಪೂರ್ಣಾವಧಿಯ ಅಧಿಕಾರಿಯ ಲಭ್ಯತೆ ದೊರೆತಂತಾಗಿದೆ.
ಪೂರ್ಣಾವಧಿ ಉಪವಿಭಾಗಾಧಿಕಾರಿಯ ನೇಮಕದಿಂದ ಕಂದಾಯ ಹಾಗೂ ಆಡಳಿತಾತ್ಮಕ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
