ಕಾರವಾರ: ಅಭಿವೃದ್ಧಿ ಹೆಸರಿನಲ್ಲಿ ಬಂದರು ಇಲಾಖೆಯು ಕಾರವಾರದ ರವೀಂದ್ರನಾಥ ಠಾಗೋರ ಸಮುದ್ರ ತೀರದಲ್ಲಿ ಕಲ್ಲುಗಳನ್ನು ಹಾಕಿ ಬ್ರೇಕ್ ವಾಟರ್ ನಿರ್ಮಾಣದ ಪ್ರಯತ್ನಕ್ಕೆ ಮುಂದಾದಲ್ಲಿ ಮೀನುಗಾರರು ಹಾಗೂ ಸಾರ್ವಜನಿಕರು ಸೇರಿ ಬೃಹತ್ ಹೋರಾಟ ನಡೆಸಬೇಕಾಗಬಹುದು ಎಂದು ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಎಚ್ಚರಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದರು ಇಲಾಖೆಯವರು ತೀರಾ ಅವೈಜ್ಞಾನಿಕವಾದ ಕಾರಣಗಳನ್ನು ನೀಡಿ ನಿಸರ್ಗದತ್ತವಾದ ರವೀಂದ್ರನಾಥ ಠಾಗೋರ್ ಕಡಲ ತೀರದ ಸೌಂಧರ್ಯವನ್ನು ಹಾಳುಗೆಡವಲು ಹೊರಟಿದ್ದು, ಖಂಡನೀಯ ಎಂದರು.
ಮೀನುಗಾರಿಕೆಗೇ ಇರುವ ಬೈತಖೋಲ್ ಬಂದರನ್ನು ಅಭಿವೃದ್ಧಿ ಹೆಸರಿನಲ್ಲಿ ಮೀನುಗಾರರಿಂದ ಕಿತ್ತುಕೊಳ್ಳುವುದು ಸರಿಯಲ್ಲ. ಅಭಿವೃದ್ಧಿ ಹಾಗೂ ದೇಶ ರಕ್ಷಣೆಯ ಹೆಸರಿನಲ್ಲಿ ಹಲವಾರು ಸಮುದ್ರ ತೀರಗಳನ್ನು ಹಾಗೂ ಮೀನುಗಾರರ ನೆಲೆಗಳನ್ನು ಈಗಾಗಲೇ ಮೀನುಗಾರರು ಕಳೆದುಕೊಂಡಿದ್ದಾರೆ. ಈಗ ಇರುವುದೊಂದೇ ಬೈತಖೋಲ್ ಬಂದರನ್ನು ಮೀನುಗಾರರಿಂದ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಮುಂದಾಗದಂತೆ ಮಾಂಗ್ರೆ ಎಚ್ಚರಿಸಿದರು.
ಬೈತಖೋಲ ಬಂದರು ನಿಸರ್ಗ ನಿರ್ಮಿತ ಬಂದರುಗಳಲ್ಲೊಂದಾಗಿದ್ದು, ಭಾರೀ ಗಾಳಿ, ಮಳೆ ಹಾಗೂ ತೂಫಾನ್ ನಂಥ ಸಂದರ್ಭಗಳಲ್ಲಿ ಹೊರ ಜಿಲ್ಲೆ ಹಾಗೂ ಹೊರರಾಜ್ಯಗಳ ಮೀನುಗಾರಿಕಾ ಬೋಟ್ ಗಳು ಬಂದರು ಬಳಿ ಸುರಕ್ಷಿತ ಆಶ್ರಯ ಪಡೆಯುತ್ತದೆ. ಇಂಥ ನಿಸರ್ಗದತ್ತ ಬಂದರನ್ನು ಅಭಿವೃದ್ಧಿ ಹೆಸರಿನಲ್ಲಿ ಬಂದರು ಇಲಾಖೆ ಹಾಳು ಮಾಡಲು ಮುಂದಾಗಿದೆ ಎಂದು ಟೀಕಿಸಿದರು.
ರಾಜ್ಯ ಹಾಗೂ ಕೇಂದ್ರ ಸರಕಾರ ಕರಾವಳಿ ತೀರಗಳಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಅನೇಕ ಯೋಜನೆಗಳನ್ನು ಸೃಷ್ಟಿಸುತ್ತಿವೆ. ಹಾಗೆಯೇ ಇನ್ನೊಂದು ಕಡೆಯಿಂದ ಈ ರೀತಿಯಾದ ಅವೈಜ್ಞಾನಿಕ ಹಾಗೂ ಪೃಕೃತಿ ವಿರುದ್ಧವಾದ ಸಮುದ್ರಕ್ಕೆ ಕಲ್ಲು ಹಾಕುವ ಯೋಜನೆಯನ್ನು ರೂಪಿಸುತ್ತಿದೆ. ಈ ದ್ವಂದ ನಿಲುವಿನ ಬಗ್ಗೆ ಸರಕಾರವೇ ಉತ್ತರಿಸಬೇಕು.
ಅತೀ ಸುಂದರವಾದ ಹಾಗೂ ನಿಸರ್ಗ ರಮಣೀಯವಾದಂತಹ ಕಾರವಾರ ಕಡಲತೀರಕ್ಕೆ ಪ್ರವಾಸೋದ್ಯಮದ ಅಡಿಯಲ್ಲಿ ಬೇರೆಡೆಯಿಂದ ಜನರು ಆಗಮಿಸುತ್ತಾರೆ. ಅಲ್ಲದೇ ಇದು ಕಾರವಾರದ ಜನತೆ ವಾಯು ವಿಹಾರಕ್ಕಾಗಿ ಪ್ರತಿನಿತ್ಯ ಓಡಾಡಲು ಇರುವಂತಹ ಏಕೈಕ ಕಡಲ ತೀರವಾಗಿದೆ.
ಇದು ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶವಿರುವ ಏಕೈಕ ಬಂದರಾಗಿದ್ದು, ಒಂದೊಮ್ಮೆ ಈ ಯೋಜನೆಯು ಅನುಷ್ಠಾನಕ್ಕೆ ಬಂದರೆ ಇದರ ನೇರವಾದ ಪರಿಣಾಮವು ಮೀನುಗಾರರ ಮೇಲೆಯೇ ಆಗುತ್ತದೆ.
ಹೀಗಾಗಿ ಪರಿಸರ ಹಾಗೂ ಮೀನುಗಾರರ ವಿರೋಧಿ ಯೋಜನೆಗಳನ್ನು ಹೇರಲು ಮುಂದಾದಲ್ಲು ಸಮಸ್ತ ಮೀನುಗಾರರಿಂದ ಹಾಗೂ ಕಾರವಾರದ ಜನತೆಯಿಂದ ಸಂಘಟಿತವಾಗಿ ಉಗ್ರವಾದ ಹೋರಾಟವನ್ನು ಮಾಡಿ ಈ ಯೋಜನೆಗೆ ತಡೆಯೊಡ್ಡುವುದಾಗಿ ಮಾಂಗ್ರೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗೌರೀಶ ಉಳ್ವೇಕರ, ಪ್ರಕಾಶ ಹರಿಕಂತ್ರ, ಚೇತನ ಹರಿಕಂತ್ರ, ಅನೀಲ್ ಹರಿಕಂತ್ರ ಸೇರಿದಂತೆ ಹಲವರು ಇದ್ದರು.
