Karwar| ಕಳೆದ ಒಂದು ವಾರದಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಘಟನೆ ಕಾರವಾರ ತಾಲೂಕಿನ ಚಿತ್ತಾಕುಲ ಪಂಚಾಯತ್ ವ್ಯಾಪ್ತಿಯ ಸಾವರಪೈ ಬಳಿ ನಡೆದಿದೆ.
ಒಂದು ವಾರದಿಂದ ಚಿತ್ತಾಕುಲ ಸುತ್ತಮುತ್ತ ಪ್ರದೇಶಗಳಲ್ಲಿ ಚಿರತೆ ಓಡಾಟ ಹೆಚ್ಚಾಗಿ, ಗ್ರಾಮಸ್ಥರಲ್ಲಿ ಭೀತಿ ಮೂಡಿಸಿತ್ತು. ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ RFO ವಿ.ಪಿ. ನಾಯ್ಕ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಓಡಾಡುವ ಜಾಗದಲ್ಲಿ ಬೋನು ಇರಿಸಿತ್ತು. ಆಹಾರದ ಹುಡುಕಾಟ ನಡೆಸುತ್ತಾ ಬಂದ ಚಿರತೆ ಶುಕ್ರವಾರ ಬೆಳಿಗ್ಗೆ ಸುಮಾರು 6.30ರ ಸುಮಾರಿಗೆ ಬೋನಿಗೆ ಬಿತ್ತು.
ಚಿರತೆ ಬೋನಿಗೆ ಬಿದ್ದಿದ್ದು ಕಂಡು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ನಂತರ ಆ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಅಂತೂ ಸುಮಾರು ಒಂದು ವಾರದಿಂದ ನಿದ್ದೆಗೆಟ್ಟಿದ್ದ ಗ್ರಾಮಸ್ಥರು ನಿರಾಳವಾದರು.
