Karwar| ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರನ್ನು ಟೀಕಿಸುವ ಯೋಗ್ಯತೆ ಅಥವಾ ಅರ್ಹತೆ ಬಿಜೆಪಿಯ ಜಗದೀಶ ನಾಯಕ ಮೊಗಟಾಗೆ ಇಲ್ಲ ಎಂದು ಜನತಾದಳ (ಎಸ್) ಜಿಲ್ಲಾ ವಕ್ತಾರ ಉದಯ ಬೋವಿ ತಿರುಗೇಟು ನೀಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಜಗದೀಶ ನಾಯಕ ಮೊಗಟಾ ಅವರು ಆನಂದ ಅಸ್ನೋಟಿಕರ್ ವಿರುದ್ಧ ಮಾಡಿರುವ ಆರೋಪಗಳು ಮತ್ತು ಟೀಕೆಗಳು ಖಂಡನೀಯ ಎಂದು ಹೇಳಿದರು.

ಆನಂದ ಅಸ್ನೋಟಿಕರ್ ಅವರು ಟಿಕೆಟ್‌ಗಾಗಿ ಯಾರ ಮನೆಯ ಬಾಗಿಲನ್ನೂ ತಟ್ಟಿಲ್ಲ. ಅದರ ಅಗತ್ಯವೂ ಅವರಿಗೆ ಇಲ್ಲ. ಇನ್ನು ಅವರು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ವಿವಿಧ ಸಮಾಜಗಳ ಮುಖಂಡರು, ಸಾರ್ವಜನಿಕರು, ಪಕ್ಷದ ಮುಖಂಡರು ಹಾಗೂ ಯುವಕರೊಂದಿಗೆ ನಿರಂತರವಾಗಿ ವಿಚಾರ ವಿನಿಮಯ ನಡೆಸುತ್ತಿದ್ದಾರೆ. ಹೊರತು ಕ್ಷೇತ್ರದಿಂದ ನಾಪತ್ತೆಯಾಗಿಲ್ಲ ಎಂದರು.

ಜಗದೀಶ ನಾಯಕ ಮೊಗಟಾ ಅವರು ತಾವು ಯಾವ ಯಾವ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೆ ಇದ್ದರು ಹಾಗೂ ಯಾರನ್ನು ಬೆಂಬಲಿಸಿದ್ದರು ಎಂಬುದನ್ನು ಮೊದಲು ನೆನಪಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು. ಮೊಗಟಾ ಊರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಜಾಸ್ತಿ ಮತ ಬಂದಿದೆ. ಪ್ರತಿ ಬಾರಿ ಚುನಾವಣೆಯ ಪೂರ್ವದಲ್ಲಿ ಮೊಗಟಾ ಅವರು ಯಾವ ಪಕ್ಷಕ್ಕಾಗಿ ದುಡಿಯುತ್ತಾರೆ ಹಾಗೂ ಚುನಾವಣೆಯಲ್ಲಿ ಯಾವ ಪಕ್ಷಕ್ಕಾಗು ಕೆಲಸಮಾಡುತ್ತಾರೆ ಎಂಬುದು ಸ್ಥಳೀಯ ಜನರ ಗಮನಕ್ಕೆ ಇದೆ ಎಂದರು.

ಕ್ವಾರಿ ನಡೆಸುವ ಮೊಗಟಾ, ಪ್ರಕರಣ ದಾಖಲಾಗಿದ್ದಾಗ ಅವರಿಗೆ ಜಾಮೀನು ನೀಡಿದ್ದು ಯಾರು ಎಂಬುದರ ಬಗ್ಗೆ ಬೇಕಿದ್ದರೆ ನಾವು ಸಾಕ್ಷಿ ನೀಡುತ್ತೇವೆ ಎಂದ ಅವರು, ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಶೇಕಡಾ 40ರ ಕಮಿಷನ್ ವ್ಯವಹಾರದಿಂದ ಆಡಳಿತಾರೂಢ ಪಕ್ಷಕ್ಕೆ ರಾಜ್ಯಾದ್ಯಂತ ಹಿನ್ನಡೆಯಾಗಿದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು ಎಂದು ಹೇಳಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆನಂದ ಅಸ್ನೋಟಿಕರ್ ಸ್ಪರ್ಧೆ ಖಚಿತ. ಒಂದು ವೇಳೆ ಪಕ್ಷದ ಟಿಕೆಟ್ ದೊರೆಯದಿದ್ದರೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಉದಯ ಬೋವಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕವೀಶ ಬೋಮಕರ್, ಗೋಪಾಲ ಹರಿಕಂತ್ರ, ಜ್ಞಾನೇಶ್ವರ ಕೊಳಂಬಕರ್, ವಿಜಯಾನಂದ ನಾಯ್ಕ, ಲಕ್ಷಿಕಾಂತ ಹರಿಕಂತ್ರ, ದೀಪಕ್ ನಾಯ್ಕ, ನಾಗರಾಜ ತಾಂಡೇಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.