ಬಳ್ಳಾರಿ: ಇದು ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ. ರಕ್ಷಕರೇ ಭಕ್ಷಕರಾದರೆ ಹೇಗೆ? ತಪ್ಪು ಕೆಲಸ ಮಾಡಿದವರ ಕೈಗೆ ಕೋಳ ಹಾಕಬೇಕಿದ್ದ ಪೊಲೀಸರ ಕೈಗೆ ಕೋಳ ಬಿದ್ದಿದೆ. ಬಳ್ಳಾರಿ ಎಸ್ಪಿ ಸುಮನ್ ಡಿ. ಪೆನ್ನೇಕರ್ ಅವರ ಗನ್ ಮ್ಯಾನ್ ಅರೆಸ್ಟ್ ಆಗಿದ್ದಾರೆ. ಅಕ್ರಮ ಪಡಿತರ ಅಕ್ಕಿ ಸಾಗಾಣೆದಾರರಿಂದ ಹಣ ವಸೂಲಿ ಮಾಡುತ್ತಿದ್ದ ಗನ್ ಮ್ಯಾನ್ ದೇವರಾಜ್ ಹಾಗೂ ಆತನ ಸಹಚರನ ಬಂಧನವಾಗಿದೆ. ಈ ಪ್ರಕರಣದಿಂದ ರಾಜ್ಯ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ.

3 ಲಕ್ಷ ವಸೂಲಿ ಮಾಡಿದ್ದ ಗನ್ ಮ್ಯಾನ್!

ಅಕ್ರಮ ಪಡಿತರ ಅಕ್ಕಿ ಸಾಗಾಣೆದಾರರಿಂದ ಮೂರು ಲಕ್ಷ ಹಣ ಪಡೆದಿದ್ದ ಎಸ್ಪಿ ಗನ್ ಮ್ಯಾನ್ ಅಂದರ್ ಆಗಿದ್ದಾರೆ. ಶರಭಯ್ಯ ಎನ್ನುವ ಪಡಿತರ ಅಕ್ಕಿ ಸಾಗಾಣೆದಾರನಿಂದ ೩ ಲಕ್ಷ ವಸೂಲಿ ಮಾಡಿದ್ದ ಬಳ್ಳಾರಿ ಎಸ್ಪಿ ಸುಮನ್ ಪನ್ನೇಕರ್ ಅವರ ಗನ್ ಮ್ಯಾನ್ ಆಗಿರುವ ದೇವರಾಜ್ ಮತ್ತು ಆತನ ಸಹಚರನ ಅರೆಸ್ಟ್ ಆಗಿದ್ದಾರೆ. ಶರಭಯ್ಯ ಎಂಬುವವರಿಂದ ಮೋಕಾ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ಹಿನ್ನೆಲೆ ಕ್ರಮ ತೆಗೆದುಕೊಳ್ಳಲಾಗಿದೆ.

ಆರೋಪಿ ಗನ್ ಮ್ಯಾನ್ ದೇವರಾಜ್ ಪಡಿತರ ಅಕ್ಕಿ ತುಂಬಿಕೊಂಡು ಆಂಧ್ರಪ್ರದೇಶಕ್ಕೆ ಹೊರಟಿದ್ದ ಎರಡು ಲಾರಿಗಳನ್ನು ಅಡ್ಡಗಟ್ಟಿ ಎಸ್ಪಿ ಸ್ಕ್ವಾಡ್ ಅಂತ ಹೇಳಿ, ಸುಮಾರು ೫ ಲಕ್ಷ ಹಣ ಕೇಳಿ, ಬಳಿಕ 3 ಲಕ್ಷ ವಸೂಲಿ ಮಾಡಿದ್ದರು. ಒಂದು ವೇಳೆ ಹಣ ನೀಡದಿದ್ದರೆ ಲಾರಿಗಳನ್ನು ಸೀಜ್ ಮಾಡಿ ಜೈಲಿಗೆ ಕಳಿಸುವುದಾಗಿ ಜೀವ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆ ಶರಭಯ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.