Banavasi| ಕಾರೊಂದರಲ್ಲಿ ಗೋವಾದಿಂದ ದಾವಣಗೆರೆ ಕಡೆ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಪೋಲಿಸರು ಕಾರು ಸಮೇತ ಜಫ್ತಿ ಮಾಡಿ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಾವಣಗೆರೆಯ ಚನ್ನಗಿರಿ ತಾಲೂಕಿನ ಕಣಿವೆ ಬಿಳಚಿ ಗ್ರಾಮದ ಅರುಣ್ ರಾಮಚಂದ್ರರಾವ್ (35) ಹಾಗೂ ರಾಘವೇಂದ್ರ ಫಕ್ಕಿರಪ್ಪ (43) ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜೂ.19ರಂದು ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಬನವಾಸಿ-ಶಿರಸಿ ರಸ್ತೆಯ ಕದಂಬ ಸರ್ಕಲ್ ಬಳಿ ಪೋಲಿಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹುಂಡೈ ವೆನ್ಯೂ ಕಾರು (ಕೆಎ-17 ಎಂಎ-3075) ಕಾರಿನ ಹಿಂಬದಿಯ ಡಿಕ್ಕಿ ಹಾಗೂ ಒಳಭಾಗದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಮದ್ಯ ಪತ್ತೆಯಾಗಿದೆ. ಕಾರಿನಲ್ಲಿ ಗೋವಾ ರಾಜ್ಯದಿಂದ ದಾವಣಗೆರೆ ಕಡೆಗೆ ಸಾಗಿಸಲಾಗುತ್ತಿದ್ದ ಅಂದಾಜು ₹ 22,200 ಮೌಲ್ಯದ
Royal Stag Superior Whisky 750 ಎಂಎಲ್ನ ಒಟ್ಟು 60 ಬಾಟಲಿಗಳು ಪತ್ತೆಯಾಗಿದೆ. ಮನೆಯಲ್ಲಿ ಕಾರ್ಯಕ್ರಮ ಇದ್ದಿದ್ದರಿಂದ ಗೋವಾದಿಂದ ಮದ್ಯ ಕೊಂಡೊಯ್ಯುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಮದ್ಯ ಸಾಗಾಟಕ್ಕೆ ಬಳಸಿದ ಕಾರನ್ನು ಸಹ ಪೋಲಿಸರು ವಶಕ್ಕೆ ಪಡೆದಿದ್ದು, ಬನವಾಸಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರವೀಂದ್ರ ಬಿರಾದಾರ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಾಜಾಳಿ ಚೆಕ್ ಪೋಸ್ಟ್ ದಾಟಿದ್ದು ಹೇಗೆ? ರಾಜ್ಯದ ಗಡಿ ಭಾಗವಾದ ಮಾಜಾಳಿಯಲ್ಲಿ ಸುಸಜ್ಜಿತವಾದ ಅಬಕಾರಿ ತನಿಖಾ ಠಾಣೆ ಇದೆ. ದಿನದ ಇಪ್ಪತ್ತನಾಲ್ಕು ಗಂಟೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ. ಜೊತೆಗೆ ಸಿಸಿ ಕ್ಯಾಮೆರಾ ಸಹ ಅಳವಡಿಸಲಾಗಿದೆ. ಇಷ್ಟೆಲ್ಲಾ ಭದ್ರತೆ ಇದ್ದಾಗಲೂ ಗೋವಾ ಅಕ್ರಮ ಮದ್ಯ ತುಂಬಿದ ಕಾರು ಮಾಜಾಳಿ ಚೆಕ್ ಪೋಸ್ಟ್ ದಾಟಿದ್ದು ಹೇಗೆ? ಅಥವಾ ಡ್ರೋನ್ ಬಳಸಿ ಗೋವಾದಿಂದ ಮಾಜಾಳಿ ಚೆಕ್ ಪೋಸ್ಟ್ ದಾಟಿಸಿ ನಂತರ ಕಾರ್ ನಲ್ಲಿ ತುಂಬಲಾಗಿತ್ತೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ವಶಕ್ಕೆ ಪಡೆದ ಇಬ್ಬರನ್ನು ವಿಚಾರಣೆ ನಡೆಸಿ ಮಾಜಾಳಿ ಚೆಕ್ ಪೊಸ್ಟ್ ನ ಕರ್ಮ ಕಾಂಡ ಹೊರಗೆ ತರಬೇಕು ಎಂಬುದು ಸಾರ್ವಜನಿಕರ ಆಗ್ರಹ.
