ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗ್ನ ಕರಾಳ ಮುಖ ಬಯಲಾಗಿದೆ. ಬಂಧಿತರ ಮೊಬೈಲ್ಗಳಲ್ಲಿ 100ಕ್ಕೂ ಹೆಚ್ಚು ನಗ್ನ ವಿಡಿಯೋಗಳು ಪತ್ತೆಯಾಗಿದ್ದು, ಇತರೆ ಅಧಿಕಾರಿಗಳನ್ನೂ ಟಾರ್ಗೆಟ್ ಮಾಡಿ ಲಕ್ಷಾಂತರ ರೂ. ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಈ ಹಿಂದೆ ಬೆಳಗಾವಿಯ ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಇಟ್ಟು ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು 50 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಹಣ ಕೊಡದಿದ್ದರೆ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ಬಂಧಿತರಾದ ಸಮೀರ್ ಶೇಖ್, ಅಬ್ದುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಅವರನ್ನು ಪೊಲೀಸರು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಚಾರಣೆಯ ವೇಳೆ ಈ ನಕಲಿ ಪತ್ರಕರ್ತರ ಕರಾಳ ಮುಖವಾಡ ಬಯಲಾಗಿದೆ. ಈ ಖತರ್ನಾಕ್ ಗ್ಯಾಂಗ್ ಕೇವಲ ಒಂದು ಅಧಿಕಾರಿಯ ಅಶ್ಲೀಲ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ಬದಲಾಗಿ ಬೆಳಗಾವಿಯ ಅನೇಕ ಅಧಿಕಾರಿಗಳ ಹಾಗೂ ಸಮಾಜದ ಗಣ್ಯ ವಕ್ತಿಗಳ ಹಿಡನ್ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಅದಲ್ಲದೇ ಅನೇಕರು ಈ ಗ್ಯಾಂಗ್ ನ ಮಾನಸಿಕ ಹಿಂಸೆ ತಾಳಲಾರದೆ ಇವರಿಗೆ ಹಣವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಬ್ಬ ಪ್ರಮುಖ ಅಧಿಕಾರಿಯ ಖಾಸಗಿ ವಿಡಿಯೋ ಪತ್ತೆ :

ಮಾಳಮಾರುತಿ ಠಾಣೆ ಪೊಲೀಸರು ಮೊಬೈಲ್ ಡೇಟಾ ರೀಟ್ರೀವ್ ಮಾಡುವ ವೇಳೆ ಮತ್ತೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯ ಖಾಸಗಿ ವಿಡಿಯೋ ಕೂಡ ಪತ್ತೆಯಾಗಿದೆ. ಆ ಅಧಿಕಾರಿಯ ಮನೆಯಲ್ಲಿ ಕೂಡ ಹಿಡನ್ ಕ್ಯಾಮರಾ ಅಳವಡಿಸಿ ದೃಶ್ಯಗಳನ್ನು ಸೆರೆ ಹಿಡಿದು ಬ್ಲ್ಯಾಕ್ಮೇಲ್ ಮಾಡಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಣ ನೀಡದಿದ್ದರೆ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಲಕ್ಷಾಂತರ ರೂ. ವಸೂಲಿ ಮಾಡಿರುವ ಆರೋಪವೂ ಕೇಳಿಬಂದಿದೆ.

ಮೊಬೈಲ್ಗಳಲ್ಲಿ ಪತ್ತೆಯಾದ ವಿಡಿಯೋಗಳ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ತೀವ್ರಗೊಳಿಸಲಾಗಿದೆ. ಗ್ಯಾಂಗ್ ಇನ್ನಷ್ಟು ಅಧಿಕಾರಿಗಳು ಅಥವಾ ಗಣ್ಯರನ್ನು ಟಾರ್ಗೆಟ್ ಮಾಡಿದ್ದಾರೆಯೇ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ.