ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದ್ದ ವೃದ್ಧೆಯ ಹತ್ಯೆ ಪ್ರಕರಣ ಸಂಬಂಧಿಸಿ ನ್ಯಾಯಾಲಯದಿಂದ ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.
ಸಿದ್ಧಾಪುರ ನಿವಾಸಿ ಅಭಿಜಿತ್ ಮಡಿವಾಳ (30), ಕೊಲೆ ಮಾಡಿದ್ದ ಅಪರಾಧಿಯಾಗಿದ್ದು, ಬಿಎನ್ಎಸ್ 103 ರ ಅಡಿಯಲ್ಲಿ ಶಿರಸಿ 1 ನೇ ಸತ್ರ ಜಿಲ್ಲಾ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಅಲ್ಲದೇ, 32 ಸಾವಿರ ರೂ. ದಂಡ ವಿಧಿಸಿ, ವೃದ್ಧೆಯ ಹೆಣ್ಣು ಮಕ್ಕಳಿಗೆ 50 ಸಾವಿರ ರೂ. ಪರಿಹಾರ ಕೊಡುವಂತೆ ಆದೇಶ ಮಾಡಿದೆ.
ನ್ಯಾಯಾಧೀಶರಾದ ಕಿರಣ್ ಕಿಣಿ ಅವರಿಂದ ಶಿಕ್ಷೆಯ ಆದೇಶ ಪ್ರಕಟವಾಗಿದ್ದು, ವೃದ್ಧೆಯ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ್ ಮಳಗೀಕರ್ ವಾದ ಮಂಡಿಸಿದ್ದರು.
2024ರ ಡಿಸೆಂಬರ್ 25ರಂದು ಸಿದ್ದಾಪುರದ ಬಸವಣ್ಣ ಗಲ್ಲಿಯಲ್ಲಿ ಪಿಗ್ಮಿ ಸಂಗ್ರಾಹಕಿಯಾಗಿದ್ದ ಗೀತಾ ಹುಂಡೇಕರ್ ಕೊಲೆಯಾಗಿತ್ತು. ಕಳ್ಳತನಕ್ಕಾಗಿ ಹೋಗಿದ್ದ ಆರೋಪಿ ವೃದ್ಧೆಯನ್ನು ಕೊಲೆ ಮಾಡಿದ್ದ. ಅಲ್ಲದೇ, ವೃದ್ಧೆಯ ಹತ್ತಿರವಿದ್ದ ಹಣ ಹಾಗೂ ಅವಳ ಕಿವಿ ಓಲೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.
ಕಳ್ಳತನ ಮಾಡಿ ಬಾಡೂಟ ಹಾಕುವ ಅಭ್ಯಾಸ ಹೊಂದಿದ್ದ ಅಪರಾಧಿಯ ಮೇಲೆ ಸಂಶಯ ಬಂದ ಹಿನ್ನೆಲೆ ಮರ್ಡರ್ ನಡೆದು ವಾರದೊಳಗೆ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು, ಇಂದು ಅಪರಾಧಿಗೆ ಶಿಕ್ಷೆ ಪ್ರಕಟವಾಗಿದೆ.
