Bhatkal|  ವಾಹನದ ಹಾರ್ನ್ ವಿಚಾರಕ್ಕೆ ಆರಂಭವಾದ ವಾಗ್ವಾದ ಗಲಾಟೆಗೆ ತಿರುಗಿ, ಚಾಕು ಇರಿತ, ಹಲ್ಲೆ ನಡೆದ ಘಟನೆ ಭಟ್ಕಳದಲ್ಲಿ ನಡೆದಿದೆ.

ಭಟ್ಕಳದ ಮಹ್ಮದ್ ತಾಹೀರ್ ತಂದೆ ಮಹ್ಮದ್ ಹುಸೇನ್ ಕುಟ್ಟಿ,  ಕೈಫ್ ಕುಟ್ಟಿ, ಯಾಸೀನ್ ಪಾಷಾ,  ಮಹ್ಮದ್ ಮೌಲಾ ಮುಸ್ತಾಕ್ ತಂದೆ ಮಕ್ಬುಲ್ ಸಾಬ್ ಹಾಗೂ ಮಹ್ಮದ್ ಖಾಸೀಂ ಅಬ್ದುಲ್ ಖಾದೀ ಈ ಐವರು ಸೇರಿದಂತೆ ಹಲವರ ಮೇಲೆ‌ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಮಾರ್ಚ್ 26ರ ಸಂಜೆ ಸುಮಾರು 6.30ರ ವೇಳೆಗೆ ಜಾಲಿ ಬೀಚ್ ರಸ್ತೆಯಿಂದ ಮನೆಗೆ ತೆರಳುತ್ತಿದ್ದ ಸಯ್ಯದ್ ಮಹ್ಮದ್ ಫಾಹೀಸ್ ಅವರಿಗೆ, ಹಿಂದಿನಿಂದ ಬಂದ ಬಿಳಿ ಬಣ್ಣದ ಬೊಲೆರೋ ವಾಹನ ಹಾರ್ನ್ ಹೊಡೆದಿದೆ. ಇದಕ್ಕೆ ಫಾಹೀಸ್ ಅವರು ‘ರಸ್ತೆ ದೊಡ್ಡದಿದೆ, ಹಾರ್ನ್ ಹೊಡೆಯದೇ ವಾಹನ ಸಾಗಬಹುದು’ ಎಂದು ಹೇಳಿದಾಗ ಸಣ್ಣ ವಾಗ್ವಾದ ನಡೆದಿದೆ.

ಈ ಘಟನೆ ಬಳಿಕ ರಾತ್ರಿ ಸುಮಾರು 7 ಗಂಟೆಗೆ ಜಾಲಿ ದೇವಿನಗರ ಕ್ರಾಸ್ ಬಳಿ ಆರೋಪಿಗಳು ಬೊಲೆರೋ, ಕೆಂಪು ಬಣ್ಣದ ಮಾರುತಿ ಸ್ವಿಫ್ಟ್ ಕಾರು ಹಾಗೂ ಜಾವಾ ಬೈಕ್‌ನಲ್ಲಿ ಬಂದು ಫಾಹೀಸ್ ಅವರ ಸ್ಕೂಟರ್ ಅಡ್ಡಗಟ್ಟಿ ದಾಳಿ ನಡೆಸಿ, ಹ*ಮಿ ಮಾ*ರಚೋ* ಎಂದು  ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದಲ್ಲದೆ, ಚಾಕುವಿನಿಂದ ದಾಳಿ ನಡೆಸಿದ್ದಾರೆ. 

ಈ ದಾಳಿಯಲ್ಲಿ ತೌಸೀಪ್ ಖತೀಬ್ ಅವರ ಹೊಟ್ಟೆ ಭಾಗಕ್ಕೆ, ಮಹ್ಮದ್ ಜುಪಾಪ್ ಅವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಗಾಯಗಳಾಗಿದೆ. ಮಹ್ಮದ್ ವಸೀಂ ದಾಮದಾ ಅವರ ಕೈ ಹಿಡಿದು ತಿರುಚಿ ಗಾಯಪಡಿಸಲಾಗಿದೆ.

ಇದಲ್ಲದೆ, ಗಲಾಟೆ ತಡೆಯಲು ಬಂದ ಮಹ್ಮದ್ ಅವುನ್ ಅವರ ಕಣ್ಣಿನ ಭಾಗ ಹಾಗೂ ಬೆರಳಿಗೆ ಹೊಡೆದು ಗಾಯಪಡಿಸಿದ್ದಾರೆ. ಘಟನೆಯಲ್ಲಿ ತೌಸೀಪ್ ಖತೀಬ್ ಹೊಡೆತ ಸಹ ತಿಂದು, ಜೊತೆಗೆ ಸುಮಾರು ₹20 ಲಕ್ಷ ಮೌಲ್ಯದ ವಾಚ್ ಹಾಗೂ ₹40 ಸಾವಿರ ಹಣ ಕಳೆದುಕೊಂಡಿದ್ದಾರೆ.

 ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.