Joida| ರೆಸಾರ್ಟ್ ಮಾಲಕನ ನಿರ್ಲಕ್ಷ್ಯದಿಂದ ರ‌್ಯಾಫ್ಟಿಂಗ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಪ್ರವಾಸಿಗ ಸಾವನ್ನಪ್ಪಿದ ದುರಂತ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ನಡೆದಿದೆ.

ವಿಜಯವಾಡ ಮೂಲದ ಮಹೇಶ್ (27) ಎಂಬುವವರೇ ಸಾವನ್ನಪ್ಪಿದ ದುರ್ದೈವಿ. ಕಾಳಿ ನದಿಯಲ್ಲಿ ರಾಫ್ಟಿಂಗ್ ಚಟುವಟಿಕೆ ನಡೆಯುತ್ತಿದ್ದ ವೇಳೆ ಸಿಲ್ವರ್ ಬಿಲ್ ರೇಸಾರ್ಟ್ ಬಳಿ ಅಳವಡಿಸಲಾಗಿದ್ದ ನೀರಿನ ಪಂಪ್‌ ಸೆಟ್‌ನಿಂದ ವಿದ್ಯುತ್ ಪ್ರವಹಿಸಿ, ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಮಹೇಶ್ ತನ್ನ ನಾಲ್ವರು ಸಾಫ್ಟ್‌ವೇ‌ರ್ ಎಂಜಿನಿಯರ್ ಸ್ನೇಹಿತರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದ. ರಾಫ್ಟಿಂಗ್ ವೇಳೆ ಮಹೇಶ್ ಪಂಪ್ ಸೆಟ್ ಸಮೀಪದಲ್ಲಿದ್ದಾಗ ವಿದ್ಯುತ್ ಶಾಕ್ ತಗುಲಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ವೇಳೆ ಜೊತೆಯಲ್ಲಿದ್ದ ಇನ್ನೂ ನಾಲ್ವರು ಪ್ರವಾಸಿಗರಿಗೂ ವಿದ್ಯುತ್ ಶಾಕ್ ಅನುಭವವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಬೇಜವಬ್ದಾರಿ ತನದಿಂದ ರ‌್ಯಾಫ್ಟಿಂಗ್ ಮಾಡುವ ಸ್ಥಳದಲ್ಲೇ ಸಿಲ್ವರ್ ಬಿಲ್ ರೇಸಾರ್ಟ್ ನ ಮಾಲಕ ಪಂಪ ಅಳವಡಿಕೆ‌ ಮಾಡಿದ್ದೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ದುರ್ಘಟನೆಯ ಬಗ್ಗೆ ಸ್ಥಳಿಯರು ಮೊದಲೇ‌‌ ಎಚ್ಚರಿಸಿದ್ದರೂ ರೆಸಾರ್ಟ್ ಮಾಲಿಕ ನಿರ್ಲಕ್ಷ್ಯ ತೋರಿದ್ದ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ರಾಮನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.