ಕಾರವಾರ: ಅರಣ್ಯಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿ ವಿವಿಧ ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿರುವ ಅರ್ಜಿಗಳ ಮರುಪರಿಶೀಲನೆಗೆ ನೀಡಿರುವ ಗಡುವನ್ನು ವಿಸ್ತರಿಸುವಂತೆ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ನಾಗೇಶ ನಾಯ್ಕ, ಕಾಗಾಲ ಒತ್ತಾಯಿಸಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಜೀವನಕ್ಕಾಗಿ ಅನಿವಾರ್ಯವಾಗಿ ಅವಲಂಬಿತರಾಗಿರುವ ಅರಣ್ಯವಾಸಿ ಕುಟುಂಬಗಳ ಭೂಹಕ್ಕು ಬೇಡಿಕೆಯು ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಲ್ಲಿ ಅತ್ಯಂತ ಪ್ರಮುಖವಾದುದಾಗಿದೆ. ಯಾವದೇ ಗಳಿಗೆಯಲ್ಲಿ ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಭಯ-ಭೀತಿಯಿಂದ ಸಾಗುತ್ತಿರುವ ಸಾವಿರಾರು ಕುಟುಂಬಗಳ ಆತಂಕದ ಬದುಕನ್ನು ಮುಕ್ತಗೊಳಿಸಿ ನೆಮ್ಮದಿ ಜೀವನಕ್ಕೆ ಸರ್ಕಾರ ಅವಕಾಶ ಮಾಡಿ ಕೊಡಬೇಕಾಗಿದೆ.
ತಲತಲಾಂತರದಿಂದ ಕಟ್ಟಿಕೊಂಡು ಬಂದಿರುವ ಅರಣ್ಯವಾಸಿಗಳ ಬದುಕಿನ ಹಕ್ಕು ಬದ್ರತೆಗಾಗಿ ‘ಅರಣ್ಯ ಹಕ್ಕು ಖಾಯ್ದೆ 2006-08’ ಹಾಗೂ ‘ಅರಣ್ಯ ಸಂರಕ್ಷಣಾ ಖಾಯ್ದೆ 1980’ ರ ಅನ್ವಯ ಅದಿನಿಯಮಗಳು ರೂಪಿತಗೊಂಡು ಹಕ್ಕು ಪತ್ರ ನೀಡಿಕೆಗೆ ಸಾಕಷ್ಟು ಅವಕಾಶಗಳಿದೆ. ಆದರೂ ಸಹ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅಂದಾಜು 53 ಸಾವಿರ ಎಕರೆಯಷ್ಟು ಭೂಬೇಡಿಕೆಯಿಂದ ಕೂಡಿರುವ 80 ಸಾವಿರ ದಷ್ಟು ಅರಣ್ಯವಾಸಿಗಳ ಅರ್ಜಿಗಳಲ್ಲಿ 72 ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ವಿವಿಧ ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿವೆ.
ದಾಖಲಾತಿ ಕೊರತೆ ಹಾಗೂ ಇತರ ಪಾರಂಪರಿಕ ಅರಣ್ಯವಾಸಿ ವ್ಯಾಖ್ಯಾನದ ಕುರಿತು ಅಧಿಕಾರಿಗಳಲ್ಲಿದ್ದ ಗೊಂದಲದಿಂದಾಗಿ ಬಹುಪಾಲು ಅರ್ಜಿಗಳು ತಿರಸ್ಕೃತಗೊಂಡಿದ್ದರೂ ಸಹ ಅರಣ್ಯವಾಸಿಗಳ ಸತತ ಪ್ರಯತ್ನ ಮತ್ತು ಹೋರಾಟದ ಫಲವಾಗಿ ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪುನರ್ ಪರಿಶೀಲನಾ ಪ್ರಕ್ರಿಯೆ ಆರಂಭಗೊಂಡಿದೆ. ಜಿಲ್ಲಾಧಿಕಾರಿಗಳ ಈ ದಿಟ್ಟ ಕ್ರಮವು ಅತ್ಯಂತ ಶ್ಲಾಘನೀಯ.
ಆದರೆ, ಅರ್ಜಿದಾರರ ನೈಜತೆಯ ಖಚಿತತೆಗಾಗಿ ಅರಣ್ಯ ಮತ್ತು ಕಂದಾಯ ಇಲಾಖೆಗಳನ್ನೊಳಗೊಂಡ ‘ಜಂಟಿ ಪರಿಶೀಲನಾ ಸಮೀತಿ’ಯಿಂದ ಸ್ಥಳ ಮಹಜರು ನಡೆಸಬೇಕಿದ್ದು ಸ್ಥಳ ತಪಾಸಣೆ ಸಂದರ್ಭದಲ್ಲಿ ವಾಸ್ತವ್ಯದ ಮನೆ, ಬಾವಿ, ವಿದ್ಯುತ್ ಸಂಪರ್ಕ, ಸಾಗುವಳಿ ಭೂಮಿ ಸ್ವರೂಪ, ಕೃಷಿ ಚಟುವಟಿಕೆಗಳು, ನೆರೆಹೊರೆಯವರ ಸಾಕ್ಷಿ ಇತ್ಯಾದಿ ಸಮಗ್ರ ಪರಿಷ್ಕರಣೆಯಾಗಲು ಹೆಚ್ಚಿನ ಸಮಯಾವಕಾಶದ ಆಗತ್ಯತೆಯಿದೆ. ಬೃಹತ್ ಸಂಖ್ಯೆಯಲ್ಲಿರುವ ಅರ್ಜಿಗಳ ಮರುಪರಿಶೀಲನೆಗೆ ಈಗ ನೀಡಿರುವ ಫೆ. 13 ರ ಗಡುವನ್ನು ಕನಿಷ್ಟ ನಾಲ್ಕು ತಿಂಗಳಿಗೆ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ.
ಇನ್ನೂ ಸಿದ್ದಾಪುರದ ವಿ.ಎನ್. ನಾಯ್ಕ ಬೇಡ್ಕಣಿ ಮಾತನಾಡಿ, ಜಿಲ್ಲೆಯ ಎಲ್ಲಾ ಅರಣ್ಯವಾಸಿಗಳು ಸಕ್ರಮಕ್ಕಾಗಿ ತುಂಬಿರುವ ಕ್ಷೇತ್ರ 53 ಸಾವಿರ ಎಕರೆ ಪ್ರದೇಶ, ಸರ್ಕಾರ ಈಗಾಗಲೇ ವಿವಿಧ ಯೋಜನೆಗಾಗಿ 63 ಸಾವಿರ ಹೆಕ್ಟೇರ್ ಪ್ರದೇಶವನ್ನು ನೀಡಿದೆ. ಅಕ್ರಮ ಸಕ್ರಮ ಅರ್ಜಿಗಳ ಪರಿಶೀಲನೆಗಾಗಿ ಅರಣ್ಯ ಇಲಾಖೆ,ಕಂದಾಯ ಇಲಾಖೆ, ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಎಸ್.ಸಿ ಎಸ್. ಎಸ್ಟಿ ಸದ್ಯರನ್ನೊಳಗೊಂಡ ಸಮೀತಿ ರಚಿಸಿತ್ತು. ಸರ್ಕಾರದ ಈ ಎಲ್ಲಾ ಆದೇಶ ಗಾಳಿಗೆ ತೂರಿ ಅರ್ಚಿ ಪರಿಶೀಲನೆ ಮಾಡಿದ ಪರಿಣಾಮ ಇಂದು 72 ಸಾವಿರ ಅರ್ಜಿ ತಿರಸ್ಕ್ರತ ಗೊಂಡಿದೆ ಎಂದರು.
ಭಟ್ಕಳದ ರಾಮಾ ಮೊಗೇರ ಮಾತನಾಡಿ, ತಿರಸ್ಕ್ರತ ಗೊಂಡ ಅರ್ಜಿಗಳ ಪುನರ್ ಪರಿಶೀಲನೆಗೆ ಇನ್ನು ಕೇವಲ ಮೂರು ದಿನಗಳ ಅವಧಿ ಇದೆ. ಇಲ್ಲಿಯವರೆಗೂ ಭಟ್ಕಳ ತಾಲೂಕಿನಲ್ಲಿ ಅತಿಕ್ರಮಣದಾರರಿಗೆ ಹಾಗೂ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಅರ್ಜಿ ಪುನರ್ ಪರಿಶೀಲನೆ ಅವಧಿಯನ್ನು ಕನಿಷ್ಠ ನಾಲ್ಕು ತಿಂಗಳ ಅವಧಿಗೆ ಮುಂದೂಡಬೇಕು ಎಂದು ಆಗ್ರಹಿಸಿದರು.
ಪ್ರತ್ರಿಕಾಗೋಷ್ಠಿಯಲ್ಲಿ ಆರ್.ಎಚ್ ನಾಯ್ಕ, ಸುನೀಲ್ ಸೋನಿ, ವೀರಭದ್ರ ನಾಯ್ಕ, ಸಿ.ಆರ್. ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
