‘ಅಂಗೂಟಾ ಛಾಪ್ ಅಲ್ಲ’ ಎಂದೇ ಮತ್ತೆ ಗುಡುಗಿದ ಶಾಸಕ!

 ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಧ್ಯದಲ್ಲೇ ‘ವಾಕ್ ಔಟ್’ ಮಾಡಿ ಸುದ್ದಿಯಾಗಿದ್ದ ಶಾಸಕ ಸತೀಶ ಸೈಲ್, ಈಗ ಮೊಟ್ಟಮೊದಲ ಬಾರಿಗೆ ತಮ್ಮ ಆ ನಡೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ. ಆದರೆ ಅವರ ಮಾತಿನ ಧಾಟಿ ನೋಡಿದರೆ, ಉಸ್ತುವಾರಿ ಸಚಿವ ವೈದ್ಯರ ಮೇಲಿನ ಸಿಟ್ಟು ಇನ್ನೂ ತಣಿದಿಲ್ಲ ಎಂಬುದು ಸ್ಪಷ್ಟವಾಗಿದೆ.

ಮಾ.2ರಂದು ಕಾರವಾರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ, ಕಾರವಾರ ಕ್ಷೇತ್ರದಲ್ಲಿ ವೈದ್ಯರು ಹಾಗೂ ಔಷಧಿಗಳ ಕೊರತೆ ಕುರಿತು ಮಾತನಾಡುವ ಸಂದರ್ಭದಲ್ಲಿ ಸಚಿವ ವೈದ್ಯ ಮತ್ತು ಶಾಸಕ ಸೈಲ್ ನಡುವೆ ಮಾತಿಗೆ ಮಾತು ಬೆಳೆದಿತ್ತು.

ಈ ವೇಳೆ ಸಚಿವರು, “ನೀವು ಸುಮ್ನೆ ಕುತಿರಿ, ನಾನೂ ಎಲ್ಲವನ್ನೂ ಸರಿಮಾಡ್ತೇನೆ” ಎಂದು ಹೇಳಿ ಸೈಲ್ ಅವರನ್ನು ಶಾಂತಗೊಳಿಸಲು ಯತ್ನಿಸಿದ್ದರು. ಆದರೆ ಅದನ್ನು ಒಪ್ಪದ ಸೈಲ್, ಡಿಸಿ, ಸಿಇಒ, ಶಾಸಕ ಭೀಮಣ್ಣ ಹಾಗೂ ಅಧಿಕಾರಿಗಳು ಮತ್ತು ಮಾಧ್ಯಮಗಳ ಎದುರೇ ಕಿಡಿಕಾರುತ್ತಾ, “ನಾನೂ ಅಂಗೂಟಾ ಛಾಪ್ ಅಲ್ಲ” ಎಂದು ಹೇಳಿ ಸಭೆಯಿಂದ ಹೊರ ನಡೆದಿದ್ದರು.

ನಂತರ ವಿಷಯವನ್ನು ಮೃದುವಾಗಿಸಲು ಸಚಿವ ವೈದ್ಯರು, “ಕೆಲ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಚರ್ಚಿಸಿ ಬಗೆಹರಿಸಬಹುದು. ಪ್ರತಿ ಕ್ಷೇತ್ರದಲ್ಲೂ ತಾಲೂಕು ಮಟ್ಟದ ಆರೋಗ್ಯ ರಕ್ಷಾ ಸಮಿತಿ ಇದೆ. ಅಲ್ಲಿ ವೈದ್ಯರು, ಔಷಧಿ ಹಾಗೂ ಇತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಬಹುದು” ಎಂದು ಹೇಳಿ, ತಾವೂ ಸೈಲ್ ‘ಗಂಡ ಹೆಂಡ್ತಿ’ ಇದ್ದಂತೆ ಎಂದು ಹಾಸ್ಯಮಾಡಿ ‘ವಾಕ್ ಔಟ್’ಗೆ ತೇಪೆ ಹಚ್ಚಲು ಪ್ರಯತ್ನಿಸಿದ್ದರು.

ಆದರೆ ಸೈಲ್‌ ಮಾತ್ರ ಇದ್ಯಾವುದನ್ನು ಮರೆಯದೇ, ಈ ಹಿಂದೆ ಇದ್ದ ಜಿಲ್ಲಾಸ್ಪತ್ರೆ ಕ್ರಿಮ್ಸ್‌ ನೊಂದಿಗೆ ವಿಲೀನವಾಗಿದ್ದರಿಂದ ಕಾರವಾರದಲ್ಲಿ ತಾಲೂಕಾ ಮಟ್ಟದ ಆರೋಗ್ಯ ರಕ್ಷಾ ಸಮಿತಿಯೇ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಯಿಂದ ಉಸ್ತುವಾರಿ ಸಚಿವರಿಗೆ  ಪತ್ರ ಬರೆಯಿಸಿದ್ದರು. ಇಂದು ಸಹ ಈ ಪತ್ರವನ್ನು ತೋರಿಸಿ, ಸುಮ್ನೆ ಕುಳಿತುಕೋ ಎಂದು ಹೇಳಲು,  ನಾನೂ ಅಂಗೂಟಾ ಛಾಪ್‌ ಅಲ್ಲ, ನನ್ನ ತಪ್ಪು ಇರದಿದ್ದರೇ ನಾನು ಯಾಕೆ ಸುಮ್ನೆ ಕುಳಿತುಕೊ‌ಳ್ಳಲಿ, ಡೊಂಟ್ ಕ್ಯಾರ್ ಎನ್ನುತ್ತಾ,  ನಾನೂ ಯಾವತ್ತೂ ಸ್ಟಡಿ ಮಾಡಿಯೇ ಮಾತನಾಡುತ್ತೇನೆ. ಯಾವುದಕ್ಕೂ ಸುಮ್ಮನೆ ಕುಳಿಕೊಳ್ಳಲ್ಲ ಎಂದು ಉಸ್ತುವಾರಿಗೆ ಟಾಂಗ್ ನೀಡಿದ್ದಾರೆ.

 ಒಟ್ಟಾರೆ, ಕೆಡಿಪಿ ಸಭೆಯಲ್ಲಿ ನಡೆದ ‘ವಾಕ್ ಔಟ್’ ಘಟನೆಯ ಹೊಗೆ ಇನ್ನೂ ಆರಿಲ್ಲ. ಶಾಸಕ ಸೈಲ್ ನೀಡಿದ ಈ ಹೇಳಿಕೆ ಉಸ್ತುವಾರಿ ಸಚಿವ ವೈದ್ಯರ ಕಡೆಗೆ ನೇರ ‘ರಣ ವಿಳ್ಯ’ ಎಸೆದಂತಾಗಿದೆ. ಈಗ ಈ ಸವಾಲನ್ನು ಸಚಿವರು ಸ್ವೀಕರಿಸುತ್ತಾರಾ, ಅಥವಾ ಮತ್ತೆ ‘ಸುಮ್ಮನೆ ಕುತಿರಿ’ ಎಂದು ಹೇಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.