Karwar| ಸುಂದರ ಕಡಲತೀರಗಳಿಗೆ ಹೆಸರಾದ ಕಾರವಾರಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಆಗಮನ ಗಣನೀಯವಾಗಿ ಹೆಚ್ಚುತ್ತಿದೆ. ಆದರೆ, ಈ ಸೌಂದರ್ಯವನ್ನು ಸವಿಯಲು ಬರುವ ಪ್ರವಾಸಿಗರು ಜಾಗೃತಿಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕುವ ಘಟನೆಗಳು ಮರುಕಳಿಸುತ್ತಿವೆ.

ಕಡಲತೀರದ ಮರಳಿನ ಸ್ವರೂಪದ ಅರಿವಿಲ್ಲದ ಪ್ರವಾಸಿಗರು ಕುತೂಹಲ ಹಾಗೂ ಉತ್ಸಾಹದಿಂದ ತಮ್ಮ ವಾಹನಗಳನ್ನು ನೇರವಾಗಿ ಸಮುದ್ರದ ಉಸುಕಿನೊಳಗೆ ಇಳಿಸಿ ‘ಜಾಲಿ ರೈಡ್’ ಮಾಡಲು ಮುಂದಾಗುತ್ತಿದ್ದಾರೆ. ಈ ಹಂತದಲ್ಲಿ ವಾಹನಗಳು ಮರಳಿನಲ್ಲಿ ಆಳವಾಗಿ ಹೂತುಹೋಗುತ್ತಿದ್ದು, ಅವುಗಳನ್ನು ಹೊರತೆಗೆಯಲು ಪ್ರವಾಸಿಗರು ಹರಸಾಹಸ ಪಡುತ್ತಿದ್ದಾರೆ. ಅಂತಿಮವಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಕ್ರೇನ್ ಯಂತ್ರಗಳ ಸಹಾಯದಿಂದ ವಾಹನಗಳನ್ನು ಮೇಲಕ್ಕೆತ್ತಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.

ಇದಕ್ಕೆ ಪೂರಕವೆಂಬಂತೆ, ಇಂದು ಬುಧವಾರ ಸಹ ಪ್ರವಾಸಿಗರ ಬಸ್ಸೊಂದು ಸಮುದ್ರ ತೀರದ ಮರಳಿನಲ್ಲಿ ಸಿಲುಕಿಕೊಂಡ ಪರಿಣಾಮ ಚಾಲಕ ಹಾಗೂ ಪ್ರಯಾಣಿಕರು ತೀವ್ರ ಕಿರಿಕಿರಿ ಅನುಭವಿಸಿದರು.

ದೀರ್ಘಕಾಲದ ಪ್ರಯತ್ನದ ನಂತರ ಜೆಸಿಬಿ ನೆರವಿನಿಂದ ಬಸ್ಸನ್ನು ಹೊರತೆಗೆಯಲಾಯಿತು. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರವಾಸೋದ್ಯಮ ಇಲಾಖೆ ಹಾಗೂ ಕಡಲತೀರ ನಿರ್ವಹಣಾ ಸಮಿತಿಯು ತಕ್ಷಣ ಕಾರ್ಯಪ್ರವೃತ್ತರಾಗಿ, ತೀರ ಪ್ರದೇಶಕ್ಕೆ ವಾಹನಗಳ ನೇರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕಿದೆ. ಪ್ರಮುಖ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವ ಮೂಲಕ ಪ್ರವಾಸಿಗರಿಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ.

ಇದರೊಂದಿಗೆ ಪ್ರವಾಸಿಗರು ಸಹ ಜವಾಬ್ದಾರಿಯುತವಾಗಿ ವರ್ತಿಸಿ, ನಿಗದಿಪಡಿಸಿದ ಸುರಕ್ಷಿತ ಪಾರ್ಕಿಂಗ್ ಸ್ಥಳಗಳಲ್ಲೇ ವಾಹನಗಳನ್ನು ನಿಲ್ಲಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.