ಕಾರವಾರ/ಶಿರಸಿ| ಜಿಲ್ಲೆಯ ಕಾರವಾರ ಹಾಗೂ ಶಿರಸಿ ನಗರದಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾರವಾರ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿ ಮಾರ್ಕೆಟ್ ರಸ್ತೆ ಬದಿಯಲ್ಲಿ ಜೂಜಾಟ ನಡೆಸುತ್ತಿದ್ದ ಲಿಂಗನಾಯ್ಕವಾಡ ನಿವಾಸಿ ಜಗದೀಶ ಸೋಮಾಜಿ (62) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಸಾರ್ವಜನಿಕರಿಂದ ಹಣ ಪಡೆದು ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಹೇಳಿ ಅಂಕಿ ಸಂಖ್ಯೆಗಳ ಮೇಲೆ ಪಂಥ ಕಟ್ಟಿಸಿಕೊಂಡು ಓಸಿ ಮಟ್ಕಾ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಂಕೆ-ಸಂಖ್ಯೆ ಬರೆದ ಚೀಟಿ, ಖಾಲಿ ಚೀಟಿ, ಬಾಲ್ ಪೆನ್ ಹಾಗೂ ₹1,120 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಕಲಂ 78(3) ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಶಿರಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆನೆಹೊಂಡ ಕಚ್ಚಾ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ನಿರ್ನಳ್ಳಿ ಗ್ರಾಮದ ಮಹೇಶ ಕೇಶವ ಹೆಗಡೆ (44) ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸ್ ಉಪ ನಿರೀಕ್ಷಕ ನರಸಿಂಹಲು ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆರೋಪಿಯಿಂದ ₹570 ನಗದು, ಓಸಿ ಅಂಕೆ ಸಂಖ್ಯೆ ಬರೆದ ಚೀಟಿ, ಬಾಲ್ ಪೆನ್ ಹಾಗೂ ಓಸಿ ಚೀಟಿ ಬರೆಯಲು ಬಳಸುತ್ತಿದ್ದ ಐದು ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 62/2026, ಕಲಂ 78(3) ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.