Udupi|ಯುವತಿಯೋರ್ವಳ ತಲೆಗೆ ಕಲ್ಲಿನಿಂದ ಹೊಡೆದು ಆಕೆಯಿಂದ ₹80 ಸಾವಿರ ಮೌಲ್ಯದ ಚಿನ್ನ ದರೋಡೆ ಮಾಡಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.
ಅಂಕೋಲಾ ಮೂಲದ ಯೋಗಿತಾ @ ಯೋಗೀಶ್ವರಿ (26) ಕೊಲೆಯತ್ನ ಹಾಗೂ ದರೋಡೆಗೊಳಗಾದ ಯುವತಿ. ಕುಮಟಾದ ಮೇಘಾ ಮಂಜುನಾಥ ಗೌಡ, ತನ್ನ ಮೂವರು ಸ್ನೇಹಿತೆಯರಾದ ನಾಗರತ್ನ, ಗಗನಾ ಮತ್ತು ಯೋಗಿತಾ @ ಯೋಗೀಶ್ವರಿ ಜತೆ ಮಣಿಪಾಲದ ಶಾಂತಿನಗರದ ಬಳಿಯಿರುವ ವಾಗ್ಲೆ ಸ್ಟೋರ್ ಬಳಿಯಿರುವ ಸುದರ್ಶನ ಕಾಂಪ್ಲೆಕ್ಸ್ ನಲ್ಲಿ ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದರು.
ಎಂದಿನಿಂತೆ, ಮೇ 12ರಂದು ಸಂಜೆ 4ರ ಅಂದಾಜಿಗೆ ಮೇಘಾ, ನಾಗರತ್ನ ಹಾಗೂ ಗಗನಾ ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಲ್ಲಿನ ಯುನಿಟ್ 5ರ ಪ್ರೆಸ್‌ನಲ್ಲಿ ಬೈಂಡಿಂಗ್ ಕೆಲಸದ ರಾತ್ರಿ ಪಾಳಿಯನ್ನು ಮುಗಿಸಿ ವಾಪಾಸ್ ಬೆಳಿಗ್ಗೆ 7.15 ಗಂಟೆಗೆ ರೂಮಿಗೆ ತೆರಳಿದ್ದರು. ಈ ವೇಳೆ ರೂಮಿನ ಬಾಗಿಲು ಅರೆ ತೆರೆದಿದ್ದು, ಬಾಗಿಲನ್ನು ತಳ್ಳಿದಾಗ ಯೋಗಿತಾ ಎಂಬವರು ರೂಮಿನಲ್ಲಿ ನೆಲದ ಮೇಲೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಅವರ ಪಕ್ಕದಲ್ಲೇ ತುಂಡಾದ ಸಿಮೆಂಟ್ ಕಲ್ಲುಗಳು ಕೂಡಾ ಇತ್ತು. ಪರಿಶೀಲಿಸಿದಾಗ ಯೋಗಿತಾ ತಲೆಗೆ ಬಲವಾದ ಪೆಟ್ಟು ಬಿದ್ದು ಗಾಯವಾದ ವಿಚಾರ ಬೆಳಕಿಗೆ ಬಂದಿದ್ದು, ತಲೆಯಿಂದ ರಕ್ತ ಸೋರುತ್ತಿತ್ತು.
ಗಮನಿಸಿದಾಗ ಯೋಗಿತಾ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕೂಡಾ ಕಾಣೆಯಾಗಿತ್ತು. ಕೂಡಲೇ ಯೋಗಿತಾ ಎಂಬವರನ್ನು ಆಟೋರಿಕ್ಷಾದಲ್ಲಿ ಸುಮಾರು ಬೆಳಿಗ್ಗೆ 7.45 ಗಂಟೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮೇ 12ರ ಸಂಜೆ 6 ಗಂಟೆಯಿಂದ ಮೇ 13 ರ ಬೆಳಿಗ್ಗೆ 7.15 ಗಂಟೆಯ ಮಧ್ಯದಲ್ಲಿ ಯಾರೋ ದುಷ್ಕರ್ಮಿಗಳು ಯೋಗಿತಾ ಒಂಟಿಯಾಗಿರುವುದನ್ನು ಕಂಡು ರೂಮಿಗೆ ಬಂದು ಅವರ ಬಳಿಯಿಂದ ಸುಮಾರು 8 ಗ್ರಾಂ (ಅಂದಾಜು ಸುಮಾರು 80000/-ರೂ) ಬಂಗಾರದ ಸರವನ್ನು ಅಪಹರಿಸಿದ್ದರು. ಅಲ್ಲದೇ, ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯ ತಲೆಗೆ ಸಿಂಮೆಂಟ್ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
