Karwar | ಕೆಲವೇ ದಿನಗಳಲ್ಲಿ ಡಬಲ್ ಲಾಭ, ಮನೆಯಲ್ಲಿ ಕುಳಿತೇ ಲಕ್ಷಾಂತರ ಆದಾಯ”… ಇಂತಹ ಆಮಿಷದ ಮಾತುಗಳಿಗೆ ಮತ್ತೊಮ್ಮೆ ಉತ್ತರ ಕನ್ನಡದ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಅಂಕೋಲಾದ ಭಟ್ ರೊಬ್ಬರು ಬರೋಬ್ಬರಿ ₹16.78 ಲಕ್ಷ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಮೀರಾ ಹಾಗೂ ಅನನ್ಯಾ ಎಂಬ ಹೆಸರಿನ ಮಹಿಳೆಯರು ‘ಹೂಡಿಕೆ’ ಹೆಸರಿನಲ್ಲಿ ನಂಬಿಕೆ ಗಳಿಸಿ, ಕೊನೆಗೆ ಲಕ್ಷಾಂತರ ರೂಪಾಯಿ ಎಗರಿಸಿದ್ದಾರೆ. ಅಂಕೋಲಾದ ಮಠಾಕೇರಿಯ ವೀರವಿಠ್ಠಲ ದೇವಸ್ಥಾನದ ಬಳಿಯ ನಿವಾಸಿ ರಾಮನಾಥ ಪೂರ್ಣಾನಂದ ಭಟ್ (44) ವಂಚನೆಗೊಳಗಾದವರು.
ಇನ್ಸ್ಟಾಗ್ರಾಮ್‌ನಿಂದ ಶುರುವಾದ ಮೋಸದ ಆಟ: ರಾಮನಾಥ ಭಟ್ ಇನ್ಸ್ಟಾಗ್ರಾಮ್ ಬಳಸುತ್ತಿದ್ದ ವೇಳೆ “Smart Wise Quant Fund” ಎಂಬ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅತೀ ಹೆಚ್ಚು ಲಾಭ ಪಡೆಯಬಹುದು ಎಂಬ ಸಂದೇಶ ಬಂದಿತ್ತು. ಕುತೂಹಲದಿಂದ ಅವರು ಆ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ “0275 Smart Wise Quant Fund Bangalore Team” ಎಂಬ ವಾಟ್ಸಪ್ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದಾರೆ. ಆ ಗ್ರೂಪ್‌ನ ಅಡ್ಮಿನ್‌ಗಳಾಗಿದ್ದ ಅನನ್ಯಾ ಮತ್ತು ಮೀರಾ ಎಂಬುವರು, “Smart WQ Trading App” ಮೂಲಕ ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಲಾಭ ಗಳಿಸಬಹುದು ಎಂದು ಭರವಸೆ ಮೂಡಿಸಿದ್ದಾರೆ. ಆರಂಭದಲ್ಲಿ ಸಣ್ಣ ಮೊತ್ತ ಹೂಡಿಕೆ ಮಾಡಿಸಿದ ಆರೋಪಿಗಳು, ಬಳಿಕ ‘ಇನ್ನಷ್ಟು ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ’ ಎಂದು ಹಂತ ಹಂತವಾಗಿ ಭಟ್ರನ್ನು ತಮ್ಮ ಜಾಲಕ್ಕೆ ಸೆಳೆದಿದ್ದಾರೆ. ಲಾಭದ ಆಸೆಗೆ ಬಿದ್ದ ಭಟ್ರು ಮಾರ್ಚ್ 28ರಿಂದ ಮೇ 14ರವರೆಗೆ ವಿವಿಧ ಹಂತಗಳಲ್ಲಿ ರಾಮನಾಥ ಭಟ್ ಒಟ್ಟು ₹16,78,052 ಹಣವನ್ನು ಹೂಡಿಕೆ ಮಾಡಿದ್ದಾರೆ. ಆಪ್‌ನಲ್ಲಿ ಲಾಭದ ಅಂಕಿ-ಅಂಶಗಳು ಕಾಣಿಸುತ್ತಿದ್ದರೂ, ಹಣ ವಾಪಸ್ ಪಡೆಯಲು ಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಮೂರು ತಿಂಗಳಾದರೂ ಒಂದು ರೂಪಾಯಿಯೂ ಕೈಗೆ ಸಿಗದೇ ಹೋದಾಗಲೇ ತಾನು ಸೈಬರ್ ವಂಚಕರ ಬಲೆಗೆ ಬಿದ್ದಿದ್ದೇನೆ ಎಂಬುದು ಅವರಿಗೆ ಗೊತ್ತಾಗಿದೆ.
ಠಾಣೆ ಮೆಟ್ಟಿಲೇರಿದ ಭಟ್ರು: ವಂಚನೆಗೊಳಗಾಗಿದ್ದನ್ನು ಅರಿತ ರಾಮನಾಥ ಭಟ್ ಕಾರವಾರ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ: ಸಾಮಾಜಿಕ ಜಾಲತಾಣ, ವಾಟ್ಸಪ್ ಗ್ರೂಪ್ ಹಾಗೂ ಟ್ರೇಡಿಂಗ್ ಆಪ್‌ಗಳ ಮೂಲಕ ‘ಅತೀ ಹೆಚ್ಚು ಲಾಭ’ದ ಆಮಿಷ ತೋರಿಸಿ ನಡೆಯುವ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಪರಿಚಿತ ಲಿಂಕ್‌ಗಳು, ಹೂಡಿಕೆ ಸಲಹೆಗಳು ಹಾಗೂ ಖಚಿತ ಲಾಭದ ಭರವಸೆ ನೀಡುವ ಆನ್‌ಲೈನ್ ಆಪ್‌ಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂಬುದು Newswaveskannada.com ಮನವಿ.
