ಕಾರವಾರದ ಹೊರವಲಯದಲ್ಲಿರುವ ಶಿರವಾಡದಲ್ಲಿರುವ  ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಅತಂಕ ಸೃಷ್ಟಿಸಿದೆ.  ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ‌ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿದ್ದಾರೆ.

ಘಟನೆಯ ವಿವರ: ಶುಕ್ರವಾರ ಬೆಳಗಿನ ಜಾವ  3 ಗಂಟೆ ಸುಮಾರಿಗೆ  ಶಿರವಾಡದ ಡಂಪಿಂಗ್ ಯಾರ್ಡ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯನ್ನು ಆವರಿಸಿದ ಬೆಂಕಿ ಬಹು ಬೇಗನೆ ಹರಡಿದೆ.

 ಬೆಂಕಿ ಕೆಲವೇ ನಿಮಿಷಗಳಲ್ಲಿ ತೀವ್ರಗೊಂಡಿದೆ. ಎತ್ತರದ ಬೆಂಕಿ‌ ಜ್ವಾಲೆ ಹಾಗೂ ದಟ್ಟವಾದ ಹೊಗೆ ಸುಮಾರು ದೂರದವರೆಗೆ ಗೋಚರವಾಗುತ್ತಿತ್ತು,‌, ಸ್ಥಳೀಯ ನಿವಾಸಿಗಳಲ್ಲಿ ಕೆಲ ಕಾಲ‌ ಅತಂಕ ಮೂಡಿಸಿತು.

 ಸ್ಥಳೀಯರ ಮಾಹಿತಿಯ ನಂತರ ತಕ್ಷಣ ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಬೆಂಕಿಯ ತೀವ್ರತೆಯಿಂದಾಗಿ, ಸ್ಥಳೀಯ ಅಗ್ನಿಶಾಮಕ ಘಟಕಗಳಿಗೆ ಸಹಾಯ ಮಾಡಲು ಹೆಚ್ಚುವರಿಯಾಗಿ ಅಂಕೋಲಾ ಮತ್ತು ಬಿಣಗಾದ ಗ್ರಾಸಿಮ್ ಇಂಡಸ್ಟ್ರೀಸ್‌ನಿಂದ ಹೆಚ್ಚುವರಿ ಅಗ್ನಿಶಾಮಕ ದಳಗಳನ್ನು ಬೆಂಕಿ‌ ನಿಯಂತ್ರಿಸಲು ಕರೆಸಲಾಯಿತು.

ಈ ಡಂಪಿಂಗ್ ಯಾರ್ಡ್‌ಗೆ ಹತ್ತಿರದಲ್ಲೇ ವಸತಿ ಪ್ರದೇಶಗಳಿರುವುದರಿಂದ, ಬೆಂಕಿ ಮತ್ತಷ್ಟು ಹರಡದಂತೆ ಅಧಿಕಾರಿಗಳು  ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು.

 ನಗರದ ಸಂಪೂರ್ಣ ತ್ಯಾಜ್ಯಗಳನ್ನು ಈ ಶಿರವಾಡ ಡಂಪಿಂಗ್ ಯಾರ್ಡ್ ನಲ್ಲಿ ಹಾಕಲಾಗುತ್ತಿದೆ. ಈ ಡಂಪಿಗ್ ಯಾರ್ಡ್ ಬಗ್ಗೆ  ಬಹಳ ಹಿಂದಿನಿಂದಲೂ ಸ್ಥಳೀಯರ ಭಾರಿ ಆಕ್ಷೇಪವಿದೆ. ಪದೇ ಪದೇ ಸಂಭವಿಸುತ್ತಿರುವ ಬೆಂಕಿ ಅವಘಡ ಹಾಗೂ ಅಂತರಜಲ ಮಲೀನ ಗೊಂಡು  ಕುಡಿಯುವ ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತಿದೆ ಎಂಬ ದೂರು ಸ್ಥಳೀಯರದಾಗಿದೆ.