Dandeli| ದಾಂಡೇಲಿ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಸಿಜೇರಿಯನ್ ಚಿಕಿತ್ಸೆಗೆ ಬಡವರಿಂದ ಹಣ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪದ ಹಿನ್ನೆಲೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರು ವೈದ್ಯರನ್ನು ಕಠಿಣವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ದಾಂಡೇಲಿಯಲ್ಲಿ ನಡೆದ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಅವರು, ಸಾರ್ವಜನಿಕರಿಂದ ನಿರಂತರವಾಗಿ ಬರುತ್ತಿದ್ದ ದೂರುಗಳನ್ನು ಉಲ್ಲೇಖಿಸಿ, ವೈದ್ಯರಾದ ಡಾ. ಅಖಿಲ ಕಿತ್ತೂರ ಮತ್ತು ಡಾ. ಕೀರ್ತಿ ಅವರ ಲೆಫ್ಟ್, ರೈಟ್ ತಗೊಂಡ ದೇಶಪಾಂಡೆ, ‘ಹೆರಿಗೆ ಮಾಡಿಸಿ ಎಷ್ಟು ಹಣ ಪಡೆಯುತ್ತೀರಿ?’ ಎಂದು ನೇರವಾಗಿ ಪ್ರಶ್ನಿಸಿದರು. ಆಗ ‘ನಾವು ಯಾರಿಂದಲೂ ಕೇಳಿ ಪಡೆಯುವುದಿಲ್ಲ, ಅವರು ಕೊಟ್ಟರೆ ಮಾತ್ರ ಸ್ವೀಕರಿಸುತ್ತೇವೆ’ ಎಂದು ವೈದ್ಯರು ಉತ್ತರಿಸಿದರು.

ಈ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದೇಶಪಾಂಡೆ, ‘ನಿಮ್ಮ ಮಾತಿನ ಅರ್ಥ ಏನು? ಕೇಳದೇ ತೆಗೆದುಕೊಳ್ಳುವುದು ಸರಿಯೇ? ಮಾನ ಮರ್ಯಾದೆ ಇಲ್ಲವೇ?’ ಎಂದು ಗರಂ ಆಗಿ ಪ್ರಶ್ನಿಸಿದರು. ಮುಂದೆ ಯಾರಿಂದಾದರೂ ಹಣ ಸ್ವೀಕರಿಸಿದರೆ ಪೊಲೀಸ್ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ಅವರು, ಇತ್ತಿಚಿನವರೆಗೆ ಹಣ ಪಡೆದಿರುವ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.

‘ಬಡವರಿಂದ ಸುಲಿಗೆ ಮಾಡಿದರೆ ಸಹಿಸುವುದಿಲ್ಲ. ನನ್ನ ಮೇಲೆ ಪ್ರಕರಣ ದಾಖಲಾಗಿದ್ರೂ ಪರವಾಗಿಲ್ಲ, ಏನು ಮಾಡಬೇಕೆಂದು ನನಗೆ ಗೊತ್ತು’ ಎಂದು ದೇಶಪಾಂಡೆ ಕಠಿಣ ಸಂದೇಶ ನೀಡಿದ್ದಾರೆ.

ಈ ಘಟನೆ ಸ್ಥಳೀಯವಾಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗಳ ಪಾರದರ್ಶಕತೆ ಕುರಿತು ಪ್ರಶ್ನೆಗಳು ಎದ್ದಿವೆ.