Karwar| ಆಸ್ತಿ ವಿಷಯದಲ್ಲಿ ಕೊಲೆಗೈದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಶಿರಸಿಯ ಒಂದನೆಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಹಳಿಯಾಳದ ಅಕ್ಷಯ ಯಾನೆ ಆಕಾಶ ಕಿತ್ತೂರಕರ್, ಪಾಂಡುರಂಗ ಕಿತ್ತೂರಕರ್ ಹಾಗೂ ಲತಾ ಯಾನೆ ತುಳುಸಾಯಿ ಕಿತ್ತೂರಕರ್ ಎಂಬುವವರೇ ಜೀವಾವಧಿ ಶಿಕ್ಷೆಗೊಳಗಾದವರು.
ಹಳಿಯಾಳ ಪೊಲೀಸ್ ಠಾಣೆ ವ್ಯಾಪ್ತಿಯ ಬಿದೊಳ್ಳಿ ಗ್ರಾಮದ ಪಾಂಡುರಂಗ ಕಿತ್ತೂರಕರ್ ನ ಮೊದಲ ಹೆಂಡತಿ ಮಗನಾದ ಕೇಶವ ಆಸ್ತಿಯಲ್ಲಿ ತನ್ನ ಪಾಲು ಕೇಳಿದಾಗ, ಪಾಲು ಕೊಡುವುದನ್ನು ತಪ್ಪಿಸಲೆಂದು ಪ್ಲಾಸ್ಟಿಕ್ ಹಗ್ಗದಿಂದ ಮೈಮೇಲೆ ಹೊಡೆದು, ಕೊರಳನ್ನು ಕಂಬಕ್ಕೆ ಹಗ್ಗದಿಂದ ಕಟ್ಟಿ ಆತನನ್ನು ಕೊಲೆ ಮಾಡಿ, ಸಾಕ್ಷ್ಯ ನಾಶ ಮಾಡಲಾಗಿತ್ತು.
ಪ್ರಕರಣದ ಕುರಿತು ಅಂದಿನ ತನಿಖಾಧಿಕಾರಿ ಹಳಿಯಾಳ ಪೋಲಿಸ್ ಉಪನಿರೀಕ್ಷಕ ಬಿ.ಎಸ್ ಲೋಕಾಪೂರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ತಕರಣದ ವಿಚಾರಣೆ ನಡೆಸಿದ ಶಿರಸಿಯ ಒಂದನೆಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಕಿರಣ ಕಿಣಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ವಿಧಿಸಿದ್ದು, ಪ್ರಕರಣದ ನಾಲ್ಕನೇಯ ಮತ್ತು ಐದನೇಯ ಆರೋಪಿಗಳ ಮೇಲೆ ಸಾಕ್ಷ್ಯಾಧಾರ ಲಭ್ಯವಾಗದೇ ಇರುವುದರಿಂದ ಬಿಡುಗಡೆ ಮಾಡಿರುತ್ತಾರೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ಆರೋಪಿತರಿಗೆ ಶಿಕ್ಷೆ ವಿಧಿಸಬೇಕೆಂದು ಸರಕಾರದ ಪರವಾಗಿ ಸುದೀರ್ಘ ವಾದ ಮಂಡಿಸಿದ್ದರು.
