Bhatkal| ಚಲಿಸುತ್ತಿದ್ದ ಸಾರಿಗೆ ಬಸ್ಸೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಅದೃಷ್ಟವಶಾತ್ ಪಾರಾದ ಘಟನೆ ಮುರುಡೇಶ್ವರ ಬಳಿಯ ಮಾವಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಭಟ್ಕಳದಿಂದ ಕುಮಟಾ ಕಡೆ ತೆರಳುತ್ತಿದ್ದ NWKRTC ಸರ್ಕಾರಿ ಬಸ್ (KA31F1485) ನಲ್ಲಿ ಈ ಘಟನೆ ಸಂಭವಿಸಿದೆ. ಬಸ್ ಭಟ್ಕಳದಿಂದ ಹೊರಟು ಮುರ್ಡೇಶ್ವರದ ಮಾವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳಿ ಬಂದಾಗ ಬಸ್‌ನ ತಳಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಚ್ಚರಗೊಂಡ ಪ್ರಯಾಣಿಕರು ಬಸ್‌ನಿಂದ ಇಳಿದು ಸುರಕ್ಷಿತವಾಗಿ ಪಾರಾಗಿದ್ದಾರೆ.
ಘಟನೆ ತಿಳಿದ ಕೂಡಲೇ ಸ್ಥಳೀಯ ಆಟೋ ಚಾಲಕರು ಹಾಗೂ ಪ್ರಯಾಣಿಕರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅವರ ತಕ್ಷಣದ ಕ್ರಮದಿಂದ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದ್ದು, ಸಮಯೋಚಿತ ಕ್ರಮದಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.
